

ಹುಬ್ಬಳ್ಳಿ: ನಗರದ ಪ್ರಮುಖ ಅಂತರ್ಜಲ ಮೂಲವಾಗಿರುವ ಇಲ್ಲಿಯ ಉಣಕಲ್ಲ ಕೆರೆಯು ಒಂದೇ ಮಳೆಗೆ ತುಂಬಿ ಹರಿದಿದೆ. ಶುಕ್ರವಾರ ಕೋಡಿ ಬಿದ್ದಿದೆ.
ಈಗಾಗಲೇ ಸಾಕಷ್ಟು ಹೂಳು ತುಂಬಿಕೊಂಡಿರುವ ಕೆರೆಯು ವರ್ಷದುದ್ದಕ್ಕೂ ಖಾಲಿಯಾಗುವುದೇ ಇಲ್ಲ. ಜೂನ್ ಇಡೀ ತಿಂಗಳು ಮಳೆಯಾಗಲಿಲ್ಲ. ಮುಂಗಾರು ಒಂದೂವರೇ ತಿಂಗಳು ದುರ್ಬಲವಾಗಿದ್ದರೂ ಕೆರೆ ಇಷ್ಟು ಬೇಗ ತುಂಬಿಕೊಂಡಿರುವುದು ಯಾವುದೇ ಅಚ್ಚರಿ ಮೂಡಿಸಿಲ್ಲ.
ಒಳಚರಂಡಿ ಕೊಳಚೆ, ಗಟಾರಿನ ನೀರು ಹೀಗೆ ವಿವಿಧ ಕಡೆಗಳಿಂದ ಕೆರೆಗೆ ಬಂದು ಸೇರುತ್ತಿರುವುದರಿಂದ ಸದಾ ನೀರು ತುಂಬಿಕೊಂಡಿರುತ್ತದೆ. ಒಂದು ಬಿರುಸು ಮಳೆ ಆಗುತ್ತಲೇ ತುಂಬಿ ಹರಿಯಲು ಆರಂಭಿಸುತ್ತದೆ. ಇದು ಪ್ರತಿ ವರ್ಷದ ಸಂಗತಿ ಎನ್ನುತ್ತಾರೆ ಸ್ಥಳೀಯರು.
ಹತ್ತಾರು ವರ್ಷ ಉಣಕಲ್ಲ ಕೆರೆಯನ್ನು ಪಿಶಾಚಿ ತಾವರೆ ಎಂಬ ಜಲಕಳೆಯೂ ಕಾಡಿತು. ಇದೀಗ ಒಂದಿಷ್ಟು ಜಲಕಳೆ ನಿರ್ಮೂಲನೆ ಮಾಡಿ ನೀರು ಶುದ್ಧೀಕರಣ ಕಾರ್ಯ ನಡೆಸಲಾಗುತ್ತಿದೆ. ಒಂದೆಡೆ ನೀರು ಶುದ್ಧೀಕರಣ ಮಾಡಿದರೆ, ಇನ್ನೊಂದೆಡೆ ಕೊಳಕು ಬಂದು ಸೇರುತ್ತಿದೆ.
ನಾಲ್ಕೈದು ವರ್ಷಗಳಿಂದ ಕೆರೆಗೆ ಕೊಳಚೆ ಸೇರುವುದನ್ನು ತಪ್ಪಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಆದರೂ, ಯಾವುದೇ ಪರಿಣಾಮ ಬೀರಿಲ್ಲ. ನಿರಂತರ ಕೊಳಚೆ ಸೇರುತ್ತಲೇ ಇದೆ. ಹಾಗಾಗಿ ಕೆರೆ ಸದಾ ತುಂಬಿಕೊಂಡಿರುತ್ತದೆ.
ಭರ್ತಿಯಾಗಲು ಒಂದು ಅಥವಾ ಎರಡು ಅಡಿಯಷ್ಟು ಮಾತ್ರ ನೀರು ಕೆಳಗೆ ಇರುತ್ತದೆ. ಒಂದೇ ಒಂದು ದೊಡ್ಡ ಮಳೆಯಾಗಿಬಿಟ್ಟರೆ ಕೆರೆ ತುಂಬಿಕೊಳ್ಳುತ್ತದೆ. ಹೀಗೆ ಕೆರೆ ತುಂಬಿದ ನಂತರ ಹೊರಚೆಲ್ಲಿದ ನೀರು ನಾಲಾ ಮೂಲಕ ಹೋಗುತ್ತದೆ.
ಹತ್ತಾರು ವರ್ಷಗಳಿಂದ ಉಣಕಲ್ಲ ಕೆರೆ ಹೂಳು ತೆಗೆದಿಲ್ಲ. ಇದರ ಪರಿಣಾಮವಾಗಿ ದೊಡ್ಡ ಪ್ರಮಾಣದ ಹೂಳು ತಳದಲ್ಲಿರುವುದರಿಂದ ಹೆಚ್ಚು ನೀರು ಸಂಗ್ರಹವಾಗುತ್ತಿಲ್ಲ. ಒಂದೊಮ್ಮೆ ಹೂಳು ತೆಗೆಯಬೇಕಾದರೆ ಕೆರೆ ಖಾಲಿಯಾಗಬೇಕು. ಆದರೆ, ನಿತ್ಯವೂ ಮಲೀನ ನೀರು ಸೇರುತ್ತಿರುವುದರಿಂದ ಕೆರೆ ಬರಿದಾಗುವುದು ಅಸಾಧ್ಯದ ಮಾತು ಎನ್ನುತ್ತಾರೆ ಪರಿಸರ ತಜ್ಞರು.
ಸದ್ಯ ಕೆರೆ ಹಾಗೂ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳು ಚಾಲ್ತಿಯಲ್ಲಿವೆ. ಕೆರೆ ಸುತ್ತ ವಾಕಿಂಗ್ ಪಾತ್ ನಿರ್ಮಿಸಲಾಗುತ್ತಿದೆ. ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಕೆರೆ ಸೌಂದರ್ಯಿಕರಣ ಮಾಡಲಾಗುತ್ತಿದೆ. ಆದರೆ, ಊರಿನ ಕೊಳಕೆಲ್ಲ ಕೆರೆ ಸೇರುವುದನ್ನು ತಪ್ಪಿಸದೇ ಹೋದರೆ ಏನು ಪ್ರಯೋಜನ? ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.