

ಕೂಡಲಸಂಗಮ: ಕಳೆದ ನಾಲ್ಕು ದಿನದಿಂದ ಆಲಮಟ್ಟಿ, ನವಿಲುತೀರ್ಥ ಜಲಾಶಯದಿಂದ ಕೃಷ್ಣಾ, ಮಲಪ್ರಭಾ ನದಿಗೆ ನೀರು ಹರಿಬಿಟ್ಟ ಪರಿಣಾಮ ನಾರಾಯಣಪುರ ಜಲಾಶಯದ ಹಿನ್ನೀರು ತುಂಬಿದೆ.
ಕೃಷ್ಣಾ, ಮಲಪ್ರಭಾ ನದಿ ಸಂಗಮವಾದ ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪದ ಬಳಿ ನೀರಿನ ಜಲರಾಶಿ ವಿಶಾಲವಾಗಿ ಹರಡಿಕೊಂಡಿದೆ.
ಕಳೆದ ನಾಲ್ಕು ತಿಂಗಳಿಂದ ಬರಿದಾಗಿದ್ದ ಕೃಷ್ಣಾ, ಮಲಪ್ರಭಾ ನದಿ ಒಡಲು ನಾಲ್ಕು ದಿನದಲ್ಲಿ ತುಂಬಿ ಪುನಃ ಜೀವಕಳೆ ಪಡೆದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳೆದ ನಾಲ್ಕು ದಿನಗಳಿಂದ ತಂಡೋಪತಂಡವಾಗಿ ಪ್ರವಾಸಿಗರು ಸುಕ್ಷೇತ್ರಕ್ಕೆ ಆಗಮಿಸಿ ನದಿಯ ವಿಹಂಗಮ ದೃಶ್ಯ ನೋಡಿ ಸಂಭ್ರಮಿಸುತ್ತಿದ್ದಾರೆ.
ಪ್ರತಿ ವರ್ಷ ಏಪ್ರಿಲ್‌ದಿಂದ ಜೂನ್ ಅಂತ್ಯದವರೆಗೆ ನದಿ ಒಡಲು ಬರಿದಾಗುತ್ತಿತ್ತು. ಈ ವರ್ಷ ಮಾರ್ಚ್ ಕೊನೆಯ ವಾರ ಇಳಿಮುಖಗೊಂಡು ಜುಲೈ ಅಂತ್ಯಕ್ಕೆ ತುಂಬಿಕೊಂಡಿದೆ. ನಾಲ್ಕು ತಿಂಗಳು ಪುಣ್ಯಸ್ನಾನಕ್ಕೆ ಭಕ್ತರು ತೊಂದರೆ ಅನುಭವಿಸಿದ್ದರು. ಕೂಡಲಸಂಗಮ ಅಭಿವೃದ್ಧಿ ಮಂಡಳಿ ಭಕ್ತರ ಪುಣ್ಯಸ್ನಾನಕ್ಕೆ ತಾತ್ಕಾಲಿಕ ಸ್ನಾನ ಘಟ್ಟ ನಿರ್ಮಿಸಿ ಅವಕಾಶ ಮಾಡಿಕೊಟ್ಟಿತ್ತು.