ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಿ

Fill vacancies in various departments
Published on

ವಿಜಯಪುರ:ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಒಕ್ಕೂಟದ ಜಿಲ್ಲಾಧ್ಯಕ್ಷ ಅಶೋಕ ಇಳಕಲ್ಲ ಮಾತನಾಡಿ, ರಾಜ್ಯದ 7 ಕೋಟಿ ಜನತೆಗೆ ಜಾರಿಯಾಗುವ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು 7.75 ಲಕ್ಷ ಮಂಜೂರಾದ ಹುದ್ದೆಗಳ ಪೈಕಿ ಕೇವಲ 5 ಲಕ್ಷ ಹುದ್ದೆಗಳು ಭರ್ತಿಯಾಗಿದ್ದು, 2.75 ಲಕ್ಷ ಹುದ್ದೆಗಳು ಖಾಲಿ ಇವೆ. ವೇತನ ಸೌಲಭ್ಯಗಳ ನಷ್ಟ ಮತ್ತು ಖಾಲಿ ಹುದ್ದೆಗಳ ಹೊರೆ ಹಾಲಿ ನೌಕರರ ಮೇಲೆ ಬಿದ್ದಿದೆ.

ರಾಜ್ಯದ ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳು ಸೇರಿ ಶಿಕ್ಷಣ ಇಲಾಖೆಯಲ್ಲಿ 60 ಸಾವಿರ ಹುದ್ದೆಗಳು ಖಾಲಿ ಇವೆ ಎಂದರು.ಅಲ್ಲದೆ, ಆರೋಗ್ಯ ಇಲಾಖೆಯಲ್ಲೂ ಹುದ್ದೆಗಳು ಖಾಲಿ ಇವೆ. ಆಡಳಿತ ಸುಧಾರಣೆ ಆಯೋಗ&2ರ ನೌಕರ ವಿರೋಧಿ ಶಿಫಾರಸು ಹಿಂಪಡೆಯುವುದು ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ತಡೆಯಬೇಕು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆ/ಹೊರಗುತ್ತಿಗೆ/ಅತಿಥಿ ನೌಕರರಿಗೆ ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕೆಂದು ಒತ್ತಾಯಿಸಿದರು.ಒಕ್ಕೂಟದ ಗೌರವ ಸಲಹೆಗಾರ ಸುರೇಶ ಜಿ. ಬಿ. ಮಾತನಾಡಿ, ಎನ್​ಪಿಎಸ್​/ಯುಪಿಎಸ್​/ ಪಿಎಫ್​ಆರ್​ಡಿಎ ಕಾಯ್ದೆ ರದ್ದುಗೊಳಿಸಿ, ನಿಶ್ಚಿತ ಹಳೇ ಪಿಂಚಣಿ (ಎನ್​ಪಿಎಸ್​) ಮರುಸ್ಥಾಪಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಲ್ಲಿ ತುರ್ತಾಗಿ ಭರ್ತಿ ಮಾಡಬೇಕು. ಇನ್ನು ಮುಂದೆ ಗುತ್ತಿಗೆ / ಹೊರಗುತ್ತಿಗೆ ನೇಮಕಾತಿ ಕೈ ಬಿಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಮನವಿ ಮಾಡಿದರು.

ಮಹಿಳಾ ಸಂಚಾಲಕಿ ನೀಲಮ್ಮ ಹಾರದೊಳ್ಳಿ ಮಾತನಾಡಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪದಾಧಿಕಾರಿಗಳು ವಿಜಯಪುರದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು. ಅಶೋಕ ಇಳಕಲ್ಲ, ಸುರೇಶ ಜಿ. ಬಿ., ನೀಲಮ್ಮ ಹಾರದೊಳ್ಳಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net