ಡೀಸೆಲ್ ತುಂಬಿಸಿ ಹಣ ಕೊಡದೆ ಪರಾರಿ

New Project (66)
Published on

ಕಡಬ: ಬೆಳ್ಳಂಬೆಳಗ್ಗೆ ಕಡಬದ ಪೆಟ್ರೋಲ್ ಪಂಪೊಂದಕ್ಕೆ ಮಹೀಂದ್ರಾ ಥಾರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಡೀಸೆಲ್ ತುಂಬಿಸಿ ಹಣ ನೀಡದೆ ಪರಾರಿಯಾದ ಘಟನೆ ಬುಧವಾರ ಮುಂಜಾನೆ ನಡೆದಿದೆ.

ಕಡಬ-ಸುಬ್ರಹ್ಮಣ್ಯ ರಸ್ತೆಯ ಕಡಬದ ಹಳೇ ಸ್ಟೇಷನ್ ಬಳಿಯ ಹಿಂದುಸ್ಥಾನ್ ಪೆಟ್ರೋಲ್ ಪಂಪ್‌ನಲ್ಲಿ ಮುಂಜಾನೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥಾರ್ ಜೀಪ್‌ನಲ್ಲಿ ಬಂದ ವ್ಯಕ್ತಿ ತನ್ನ ವಾಹನಕ್ಕೆ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿದ್ದಾನೆ. ನಂತರ ಒಂದು ಕ್ಯಾನ್ ನೀಡಿ ಅದರಲ್ಲಿ ತುಂಬಿಸಲು ಸೂಚಿಸಿದಾಗ ಪೆಟ್ರೋಲ್ ಬಂಕ್ ಸಿಬ್ಬಂದಿ ಗಾಡಿಯಿಂದ ಸ್ವಲ್ಪ ದೂರ ತೆರಳಿದ್ದು, ಈ ಸಂದರ್ಭ ಏಕಾಏಕಿ ಪರಾರಿಯಾಗಿರುವುದು ಸಿಸಿ ಕ್ಯಾಮರಾ ದೃಶ್ಯದಲ್ಲಿ ಸೆರೆಯಾಗಿದೆ. ಕಡಬ ಪೇಟೆ ರಸ್ತೆಯತ್ತ ತೆರಳಿದ್ದು ಬಳಿಕ ಯಾವ ಕಡೆ ತೆರಳಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ. ಕಡಬ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಈ ವಾಹನದಲ್ಲಿರುವ ನಂಬರ್ ನಕಲಿಯಾಗಿರುವುದು ಗೊತ್ತಾಗಿದೆ. ಇದೇ ನೋಂದಣಿ ಮಹೀಂದ್ರಾ ಥಾರ್ ಡಿಸೆಂಬರ್ 25ರಂದು ಸುಳ್ಯದ ಪೈಚಾರ್ ಪೆಟ್ರೋಲ್ ಬಂಕ್‌ನಿಂದ 6 ಸಾವಿರ ರೂ. ಮೊತ್ತದ ಡೀಸೆಲ್ ತುಂಬಿಸಿ ಪರಾರಿಯಾಗಿತ್ತು. ಜ.22ರಂದು ಬೆಳಗ್ಗೆ ಕಡಬದಲ್ಲಿ 7 ಸಾವಿರ ರೂ. ಡೀಸೆಲ್ ತುಂಬಿಸಿ ಪರಾರಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net