

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಕಳೆದೆರಡು ವರ್ಷಗಳ ಹಿಂದೆ ಸಂಪೂರ್ಣ ಖಾಲಿಯಾಗಿದ್ದ ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ನಗರಗಳಿಗೆ ನೀರು ಪೂರೈಸುವ ಜಕ್ಕಲಮಡು ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನಗರಗಳಿಗೆ 1ರಿಂದ 2 ವರ್ಷ ನೀರಿನ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ.
ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ಗಡಿ ಭಾಗದಲ್ಲಿರುವ ಜಲಾಶಯ 2013ರಲ್ಲಿ ನಿರ್ಮಾಣಗೊಂಡಿತ್ತು. 2018-19ರಲ್ಲಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆವರಿಸಿದ ಬರದಿಂದಾಗಿ ಸಂಪೂರ್ಣ ಬರಿದಾಗಿತ್ತು. ಇದರಿಂದಾಗಿ ಎರಡು ನಗರಗಳ ಜನತೆ ನೀರಿಗಾಗಿ ಕೊಳವೆಬಾವಿಗಳನ್ನೇ ಆಶ್ರಯಿಸಬೇಕಾಗಿ ಬಂದಿತ್ತು. ಆದರೆ ಇದೀಗ ತುಂಬುತ್ತಿರುವುದರಿಂದ ನೀರಿನ ಸಮಸ್ಯೆ ತಪ್ಪಲಿದೆ.
ಉತ್ತಮ ಮಳೆ!: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬೀಳುತ್ತಿದೆ. ಪ್ರಮುಖವಾಗಿ ಜಕ್ಕಲಮಡು ಜಲಾಶಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ವಾಡಿಕೆಯಂತೆ 156 ಮಿಮೀ ಮಳೆಯಾಗಬೇಕಿತ್ತು. ಆದರೆ ತಿಂಗಳು ಆರಂಭದ 10 ದಿನಗಳಲ್ಲಿ 171 ಮಿಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರೂಪಾ ತಿಳಿಸಿದರು.
ಉತ್ತಮ ಮಳೆಯಿಂದ ಜಕ್ಕಲಮಡು ಜಲಾಶಯ ಭರ್ತಿಯಾಗಿದೆ. ದೊಡ್ಡಬಳ್ಳಾಪುರ ನಗರಕ್ಕೆ ಕನಿಷ್ಠ ಇನ್ನು ಒಂದೂವರೆ ವರ್ಷ ನೀರಿನ ಸಮಸ್ಯೆ ಬರುವುದಿಲ್ಲ. ರಾಮೇಗೌಡ, ದೊಡ್ಡಬಳ್ಳಾಪುರ ನಗರಸಭೆಯ ನೀರಿನ ವಿಭಾಗದ ಎಇಇ