

ಆನಂದಪುರ: ಗಿಳಾಲಗುಂಡಿ ಗ್ರಾಮದ ಗಡಿಯಲ್ಲಿರುವ ಕೊಲ್ಲಿ ಬಚ್ಚಲು ಅಣೆಕಟ್ಟು ಭರ್ತಿಯಾಗಿದ್ದು ಧುಮ್ಮಿಕ್ಕಿ ಹರಿಯುತ್ತಿದೆ. ಗಿಳಾಲಗುಂಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿಮೀ ದೂರದಲ್ಲಿರುವ ಈ ಅಣೆಕಟ್ಟು ಸುತ್ತಲೂ ಅರಣ್ಯದಿಂದ ಕೂಡಿದೆ. ಅಣೆಕಟ್ಟೆಯಿಂದ ಹೊರ ಹೊಮ್ಮುವ ನೀರು ಗಿಳಾಲಗುಂಡಿಯ ಅಮ್ಮನ ಕೆರೆಗೆ ಹರಿದು ಬರುತ್ತಿದ್ದು ಕೆಲವಷ್ಟು ನೀರು ಬಲದಂಡೆ ಕಾಲುವೆ ಮೂಲಕ ತಂಗಳವಾಡಿ ಮತ್ತು ಹೊಸಕೊಪ್ಪ ಗ್ರಾಮದ ಕಡೆ ಹರಿದು ಹೋಗುತ್ತಿದೆ.
ತುಪ್ಪೂರು ಗ್ರಾಪಂ ವ್ಯಾಪ್ತಿಯ ಕೋಣೆಹೊಸೂರು ಗ್ರಾಮದ ಕೊನೆಯಲ್ಲಿರುವ ಕೊಲ್ಲಿ ಬಚ್ಚಲು ಹಳ್ಳಕ್ಕೆ ನಿರ್ಮಿಸಿರುವ ಚಿಕ್ಕ ಡ್ಯಾಂ ಇದಾಗಿದೆ. ಡ್ಯಾಂ ಭರ್ತಿಯಾಗಿ ಹೊರ ಉಕ್ಕುವ ನೀರು ಗಿಳಾಲಗುಂಡಿಯ ಅಮ್ಮನಕೆರೆ ಸೇರಿ ಅಲ್ಲಿಂದ ಮುಂದಕ್ಕೆ ಲಕ್ಕವಳ್ಳಿ ಹಳ್ಳ ಸೇರಿ ನಂದಿಹೊಳೆಗೆ ಕೂಡುತ್ತದೆ. ಇನ್ನು ಅರ್ಧ ನೀರು ಗೌತಮಪುರ ಸಮೀಪದ ಅಂಬ್ಲಿಗೊಳ ಜಲಾಶಯ ಸೇರುತ್ತದೆ.
ಸಣ್ಣ ನೀರಾವರಿ ಯೋಜನೆಯಡಿ 2005ರಲ್ಲಿ ಪ್ರಾರಂಭಗೊಂಡ ಈ ಅಣೆಕಟ್ಟು 2008ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಒಟ್ಟು 9 ಮೀಟರ್ ಎತ್ತರ ಹಾಗೂ 62 ಮೀಟರ್ ಅಗಲದ ಈ ಅಣೆಕಟ್ಟು ಆಕರ್ಷಕವಾಗಿದೆ. 8 ಮೀಟರ್ ಅಗಲದ ವಿಸ್ತಾರದಲ್ಲಿ ನೀರು ಉಕ್ಕಿ ಹರಿಯುವ ವ್ಯವಸ್ಥೆ ಇದೆ. ತುಪ್ಪೂರು ಗ್ರಾಪಂ ವ್ಯಾಪ್ತಿಯ ಕೋಣೆಹೊಸೂರು ಗ್ರಾಮದ ಕೊನೆಯವರೆಗೂ ಈ ಅಣೆಕಟ್ಟೆಯ ಹಿನ್ನೀರು ತುಂಬುತ್ತದೆ. ಶಿವಮೊಗ್ಗ-ಸಾಗರ ಮಾರ್ಗದ ಹೆದ್ದಾರಿಯಲ್ಲಿ ಗಿಳಾಲಗುಂಡಿಯಿಂದ ಈ ಅಣೆಕಟ್ಟೆಗೆ ಹೋಗಲು ರಸ್ತೆ ಇದೆ.