ಎಲ್ಲ ಕೆರೆಗಳಿಗೆ ನೀರು ತುಂಬಿಸಿ

21 KNK 01
ಕನಕಗಿರಿಯಲ್ಲಿ ಶಿರಸ್ತೇದಾರ ಶರಣಪ್ಪ ಅವರಿಗೆ ಸೋಮವಾರ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಮುಖಂಡರಾದ ಕನಕಾಚಲ ನಾಯಕ, ರಾಮಣ್ಣ ಜಾಡಿ, ಮಲ್ಲಿಕಾರ್ಜುನ ರೆಡ್ಡಿ, ಎಸ್.ದೊಡ್ಡನಗೌಡ, ಕಾರ್ಯಕರ್ತರಾದ ಆಂಜನೇಯ, ನಾಗರಾಜ ಇತರರಿದ್ದರು.
Published on

kಕನಕಗಿರಿ: ತಾಲೂಕು ವ್ಯಾಪ್ತಿ ಕೆರೆಗಳನ್ನು ಭರ್ತಿ ಮಾಡುವ ಜತೆಗೆ ಪಂಪ್‌ಹೌಸ್ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸೇನೆ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ಕೆರೆ ತುಂಬುವ ಯೋಜನೆ ಸಮರ್ಪಕ ಜಾರಿಯಾದರೆ ಕನಕಗಿರಿ ತಾಲೂಕಿನ ಹತ್ತಾರು ಗ್ರಾಮಗಳ ಸಾವಿರಾರು ರೈತರ ಬಾಳು ಬಂಗಾರವಾಗಲಿದೆ. ಆದರೆ, ಕೆರೆ ತುಂಬುವ ಯೋಜನೆ ಬಹುತೇಕೆ ಹಳ್ಳ ಹಿಡಿದಿದೆ. ನೆಪಕ್ಕೆ ಎನ್ನುವಂತೆ ಒಂದಷ್ಟು ದಿನ ಕನಕಗಿರಿಯ ಲಕ್ಷ್ಮೀದೇವಿ ಕೆರೆ ಹಾಗೂ ಕಾಟಾಪೂರ ಕೆರೆಗೆ ಮಾತ್ರ ನೀರು ಬರುತ್ತವೆ. ಆದರೆ, ಮುಂದಿನ ಯಾವ ಕೆರೆಗಳಿಗೂ ನೀರು ಬರುತ್ತಿಲ್ಲ ಎಂದು ಹೇಳಿದರು.

ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ಎಲ್ಲ ಕೆರೆಗಳಿಗೆ ನೀರು ತುಂಬಿಸುತ್ತಿದ್ದೇವೆ ಎಂದು ಸಚಿವ ಶಿವರಾಜ ತಂಗಡಗಿ ಸುಳ್ಳು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಕೆರೆಗಳಿಗೆ ನೀರು ಬರುತ್ತಿಲ್ಲ. ಕೂಡಲೇ ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕು. ಮುಂದಿನ 15 ದಿನದಲ್ಲಿ ಎಲ್ಲ ಕೆರೆಗಳಿಗೆ ನೀರು ಬರುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹಂತಹಂತವಾಗಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ವಾಲ್ಮೀಕಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸರ್ಕಾರ ಮತ್ತು ಸಚಿವ ಶಿವರಾಜ ತಂಗಡಗಿ ವಿರುದ್ಧ ಘೋಷಣೆ ಕೂಗಿದರು. ದಲಿತ ಸಂಘಟನೆ ಹಿರಿಯ ಮುಖಂಡ ಹುಲಿಹೈದರ ಕನಕಾಚಲ ನಾಯಕ, ರೈತ ಮುಖಂಡರಾದ ರಾಮಣ್ಣ ಜಾಡಿ, ಮಲ್ಲಿಕಾರ್ಜುನ ರೆಡ್ಡಿ, ಎಸ್.ದೊಡ್ಡನಗೌಡ, ಕಾರ್ಯಕರ್ತರಾದ ಆಂಜನೇಯ, ನಾಗರಾಜ, ದುರಗಪ್ಪ, ಈಶಪ್ಪ, ಮಹೇಶ, ಶರಣಬಸವ ಸೇರಿ ಇತರರು ಇದ್ದರು.

ಹಕ್ಕೊತ್ತಾಯ ಮಂಡನೆ 

ಕೆರೆ ನಿರ್ವಹಣೆಗೆ ಟೆಂಡರ್ ಕರೆದು, ಪಂಪ್‌ಹೌಸ್ ಮತ್ತು ಪೈಪ್‌ಲೈನ್ ನಿರ್ವಹಣೆ ಕಾರ್ಮಿಕರಿಗೆ ವೇತನ ಪಾವತಿ ಮಾಡಬೇಕು. ಕನಕಗಿರಿ ತಾಲೂಕಿಗೆ ಜೆಸ್ಕಾಂ ಎಇಇ ಕಚೇರಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಅಗ್ನಿಶಾಮಕ ಠಾಣೆ, ಬಸ್ ಘಟಕ, ಉಪ ನೋಂದಣಾಧಿಕಾರಿ ಕಚೇರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ರೈತ ಭವನ ಮತ್ತು ಪತ್ರಿಕಾ ಭವನ ನಿರ್ಮಿಸಬೇಕು. ಮಳೆಗೆ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೆ ಒಳಗಾಗಿದ್ದು, ಕೂಡಲೇ ಕಂದಾಯ ಇಲಾಖೆಯಿಂದ ಸರ್ವೇ ಮಾಡಿಸಿ, ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಹಕ್ಕೊತ್ತಾಯ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net