

ಬೆಂಗಳೂರು: ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಅವರ ಡೀಪ್ಫೇಕ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಿಡಿಗೇಡಿಯೋರ್ವ ಅತಿರೇಕ ಪ್ರದರ್ಶಿಸಿದ್ದನು. ಹೀಗೆ ಅಸಹ್ಯವಾಗಿ ಟ್ರೋಲ್ ಮಾಡಿದ್ದ ಕಿಡಿಗೇಡಿ ವಿರುದ್ಧವಾಗಿ ದೊಡ್ಮನೆ ಅಭಿಮಾನಿಗಳು ದೂರು ಸಲ್ಲಿಕೆ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಅವರ ಕುರಿತಾಗಿ ಅಸಹ್ಯವಾಗಿ ಟ್ರೋಲ್ ಮಾಡಿದ್ದ ಯೋಗೇಂದ್ರ ಪ್ರಸಾದ್ ಎಂಬ ವ್ಯಕ್ತಿ ಕುರಿತಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಅಭಿಮಾನಿಗಳು ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.
ನಡೆದಿದ್ದೇನು?: ಯೋಗೇಂದ್ರ ಪ್ರಸಾದ್ ಎಂಬ ಟ್ವಿಟರ್ ಖಾತೆಯಲ್ಲಿ ಡೀಪ್ಫೇಕ್ ವಿಡಿಯೋ ಹಂಚಿಕೊಳ್ಳಲಾಗಿದ್ದು, ಗಂಡ ಸತ್ತ ಮು** ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ 29 October 2024 ರಂದು ನಾನು ವಿವಾಹ ವಾಗಲಿದ್ದೇನೆ. ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು, ರಾಜವಂಶದ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ. ಸ್ಥಳ : ಶ್ರೀ ಕಂಠೀರವನಗರ ಸ್ಟುಡಿಯೋ, ನಾರ್ತ್ ವೆಸ್ಟ್ ಬೆಂಗಳೂರು ಎಂದು ಬರೆಯಲಾಗಿದೆ.
ಟ್ವಿಟರ್ನಲ್ಲಿ ಕೇವಲ 100 ಫಾಲೋವರ್ಸ್ ಹೊಂದಿರುವ ಯೋಗೇಂದ್ರ ಎಂಬ ಹೆಸರಿನ ಈ ವ್ಯಕ್ತಿಯೂ ರಾಜವಂಶದ ಅಭಿಮಾನಿ ಮತ್ತು ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಬಿನ್ನಿಪೇಟೆ ಅಧ್ಯಕ್ಷ ಎಂದು ತನ್ನ ಬಯೋನಲ್ಲಿ ಹಾಕಿಕೊಂಡಿದ್ದಾನೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಡೀಪ್ಫೇಕ್ ವಿಡಿಯೋ ನೋಡಿ ಕಿಡಿಕಾರಿರುವ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ದೂರು ಸ್ವೀಕರಿಸಿ ಮಾತನಾಡಿರುವ ಅಧ್ಯಕ್ಷ ಎನ್ಎಂ ಸುರೇಶ್, ‘ಈ ರೀತಿ ಘಟನೆ ಇತ್ತೀಚೆಗೆ ಹೆಚ್ಚಾಗುತ್ತಿದೆ, ಚಿತ್ರರಂಗದಲ್ಲಿ ಎಲ್ಲರೂ ಒಂದು ಕುಟುಂಬ ಇದ್ದ ಹಾಗೆ. ಯಾರೂ ಈ ರೀತಿ ಕೃತ್ಯ ಮಾಡಬಾರದು, ಈ ಬಗ್ಗೆ ಕಮಿಷನರ್, ಸೈಬರ್ ಕ್ರೈಂ ಗೆ ದೂರು ಕೊಡುತ್ತೀವಿ’ ಎಂದು ಭರವಸೆ ನೀಡಿದ್ದಾರೆ.
ಸಾರಾ ಗೋವಿಂದು ಮಾತನಾಡಿ, ‘ಕೆಲ ಕಿಡಿಗೇಡಿಗಳು ಈ ರೀತಿ ಕೃತ್ಯ ಮಾಡುತ್ತಿದ್ದಾರೆ. ಇಂತ ಕೆಲಸ ಮಾಡುವವರು ರಣಹೇಡಿಗಳು, ಧೈರ್ಯ ಇದ್ದರೆ ಮುಂದೆ ಬಂದು ಮಾತಾಡಲಿ, ಈ ಬಗ್ಗೆ ಪೊಲೀಸ್ ಕಮಿಷನರ್ ಗೆ ದೂರು ಕೊಡುತ್ತೇವೆ. ರಾಜ್ ಕುಮಾರ್ ಕುಟುಂಬಕ್ಕೆ ಒಂದು ಬೆಲೆಯಿದೆ, ಕರ್ನಾಟಕ ಚಿತ್ರ ರಂಗದ ಗೌರವ ಹಾಳುಮಾಡಬೇಡಿ. ಈ ರೀತಿ ಕೃತ್ಯ ಮಾಡಿದವರ ವಿರುದ್ಧ ಕ್ರಮ ಆಗುತ್ತೆ’ ಎಂದಿದ್ದಾರೆ.