

ಕೆ.ಆರ್.ಪೇಟೆ: ಮಹಿಳೆಯರು ತಮ್ಮ ವಿರುದ್ಧ ಅನ್ಯಾಯ, ದೌರ್ಜನ್ಯ ನಡೆದ ಸಂದರ್ಭದಲ್ಲಿ ಯಾವ ಭಯವೂ ಇಲ್ಲದೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವ ಧೈರ್ಯ ಬೆಳಸಿಕೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಸಲಹೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಗುರುವಾರ ಪತ್ರಕರ್ತರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ಕರ್ನಾಟಕ ಪೊಲೀಸ್ ಜನಸ್ನೇಹಿ ಎಂದೇ ಹೆಸರುವಾಸಿಯಾಗಿದೆ. ಮಹಿಳೆಯರು ಸ್ಥಳೀಯ ಪೊಲೀಸ್ ಠಾಣೆ ಅಥವಾ ಪೊಲೀಸ್ ಅಧಿಕಾರಿಗಳ ಸಂಖ್ಯೆಯನ್ನು ತಮ್ಮ ಬಳಿ ಸದಾ ಇಟ್ಟಿಕೊಳ್ಳಬೇಕು. ಕಷ್ಟ ಅಥವಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸಂದರ್ಭದಲ್ಲಿ, ಸರಿಯಾದ ಸ್ಪಂದನೆ ಸಿಗದಿದ್ದರೆ ನಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಕಿವಿ ಮಾತು ಹೇಳಿದರು.
ಮಹಿಳೆಯರು ಸ್ವಾವಲಂಬಿಗಳಾಗಿ:
ಮಹಿಳೆಯರು ಮನೆಯಿಂದ ಹೊರ ಹೋಗುವ ಮುನ್ನ ಅವರ ಪರ್ಸ್‌ನಲ್ಲಿ ಹಣ ವಿರಬೇಕು. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರೃ ಅತ್ಯವಶ್ಯಕವಾಗಿದ್ದು, ಮಹಿಳೆಯರು ಸ್ವಾವಲಂಬಿಗಳಾಗಲು ಹಲವು ತರಬೇತಿ ಹಾಗೂ ಯೋಜನೆಗಳನ್ನು ರೂಪಿಸಿದೆ ಸದುಪಯೋಗಪಡಿಸಿಕೊಳ್ಳಿ ಎಂದರು.
ಬಾಲ್ಯವಿವಾಹದಂತಹ ಅನಿಷ್ಟವನ್ನು ತೊಡೆದು ಹಾಕಲು ಮಹಿಳೆಯರಿಂದಲೇ ಸಾಧ್ಯ. ತಾಯಿ ತನ್ನ ಮಗಳಿಗೆ ವಿದ್ಯಾಭ್ಯಾಸ ನೀಡುತ್ತೇನೆ, ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಪಣ ತೊಡಬೇಕು ಎಂದರು.
ಬಸ್ ನಿಲ್ದಾಣಕ್ಕೆ ದಿಢೀರ್‌ಭೇಟಿ:
ಪಟ್ಟಣದ ಬಸ್ ನಿಲ್ದಾಣಕ್ಕೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಮಾತಾಡಿಸಿ ಬಸ್ ವ್ಯವಸ್ಥೆಯ ಬಗ್ಗೆ ವಿಚಾರಿಸಿದರು.
ಹಲವು ವಿದ್ಯಾರ್ಥಿನಿಯರು ತಮ್ಮ ಊರಿಗೆ ಸರಿಯಾಗಿ ಬಸ್ ಸಂಪರ್ಕ ಇಲ್ಲದಿರುವ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ. ನಮ್ಮ ಊರಿಗೆ ಸರಿಯಾಗಿ ಬಸ್ ಸಂಪರ್ಕ ಕಲ್ಪಿಸಿಕೊಡಿ ಎಂದು ಮನವಿ ಮಾಡಿದದರು. ಅನೇಕ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇದ್ದರೂ ಕೆಲವು ಕಡೆ ಬಸ್ ಚಾಲಕರು ವಾಹನ ನಿಲ್ಲಿಸುತ್ತಿಲ್ಲ ಎಂದರು. ತಕ್ಷಣ ಮಂಡ್ಯ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಹೇಳಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಬಸ್ ನಿಲ್ದಾಣದಲ್ಲಿ ತಾಯಿ ಮಗುವಿನ ಕೊಠಡಿ ಇಲ್ಲದಿರುವುದನ್ನು ಕಂಡು ಪ್ರತಿ ಬಸ್ ನಿಲ್ದಾಣದಲ್ಲಿ ತಾಯಿ ಮಗುವಿನ ಕೊಠಡಿ ಇರಬೇಕು, ಏಕೆ ನಿರ್ಮಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಮಹಿಳಾ ವಿಶ್ರಾಂತಿ ಕೊಠಡಿಗೆ ಭೇಟಿ ನೀಡಿ ಕೊಠಡಿಯ ಶುಚಿತ್ವ ಗಮನಿಸಿದರು. ನಂತರ ಶೌಚಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಂದ ದೂರು ಆಲಿಸಿದರು. ಸಂಬಂಧಪಟ್ಟ ಸ್ವಚ್ಛತಾ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಮಾಹಿಳೆಯರಿಂದ ಹಣ ವಸೂಲಿ ಮಾಡಬಾರದು ಹಾಗೂ ಶೌಚಗೃಹಕ್ಕೆ ಸೂಕ್ತ ಬಾಗಿಲುಗಳ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದರುವ ಪಟ್ಟಣ ಠಾಣೆಯ ನಿರೀಕ್ಷಕಿ ಸುಮಾರಾಣಿ ಸೂಕ್ತ ಬಂದೋಬಸ್ತ್ ಮಾಡಿದ್ದರು.