

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಪೆನ್ ಡ್ರೈವ್ ತೋರಿಸಿ ಅದನ್ನು ಸ್ಪೀಕರ್‌ಗೆ ಅಥವಾ ಪೊಲೀಸರಿಗೆ ನೀಡದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಿಧಾನಸೌಧ ಠಾಣೆಗೆ ದೂರು ನೀಡಲಾಗಿದೆ.
ಜು.೭ ರಂದು ಕುಮಾರಸ್ವಾಮಿ ಅವರು, ಕಾಂಗ್ರೆಸ್ ಸರ್ಕಾರ ಹಲವು ಇಲಾಖೆಗಳಲ್ಲಿ ಕಮಿಷನ್ ಪಡೆಯುತ್ತಿರುವ ಬಗ್ಗೆ ಆರೋಪಿಸಿ, ಈ ಕುರಿತು ಪೆನ್‌ಡ್ರೈವ್ ನನ್ನ ಬಳಿ ಇದೆ ಎಂದಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಮಾಹಿತಿಯನ್ನು ನೀಡದ ಹಿನ್ನಲೆ ವಕೀಲ ಅಮೃತೇಶ್ ಅವರು ಕುಮಾರಸ್ವಾಮಿ ವಿರುದ್ಧ ವಿಧಾನಸೌಧ ಠಾಣೆಗೆ, ನಗರ ಪೊಲೀಸ್ ಆಯುಕ್ತರಿಗೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಲೀಗಲ್ ನೋಟಿಸ್‌ಗೂ ಉತ್ತರವಿಲ:್ಲ
ಪೆನ್‌ಡ್ರೈವ್ ತೋರಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ನೀಡಲಾಗಿತ್ತು. ಆದರೆ, ಇದ್ಯಾವುದಕ್ಕೂ ಉತ್ತರ ಬಂದಿಲ್ಲ. ಪೆನ್ ಡ್ರೈವ್ ಅನ್ನು ಸ್ಪೀಕರ್‌ಗೆ ಅಥವಾ ಪೊಲೀಸರಿಗೆ ಆಗಲಿ ಇನ್ನೂ ನೀಡಿಲ್ಲ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದವರು. ಈ ರೀತಿ ಮಾಡಿರುವುದು ಸರಿಯಲ್ಲ. ಈ ಹಿನ್ನೆಲೆ ಕುಮಾರಸ್ವಾಮಿ ವಿರುದ್ದ ಬ್ಲಾಕ್ ಮೇಲ್, ಬೆದರಿಕೆ, ಅಪರಾಧಿಕ ಸಂಚು ಸೇರಿ ಇತರೆ ಆರೋಪದಡಿ ಕ್ರಮ ತೆಗೆದುಕೊಂಡು, ಜತೆಗೆ ಕುಮಾರಸ್ವಾಮಿಯವರ ಬಳಿ ಇರುವ ಪೆನ್ ಡ್ರೈವ್ ಜಪ್ತಿ ಮಾಡಬೇಕು ಮತ್ತು ಅವರ ವಿರುದ್ಧ ಕ್ರಮತೆಗೆದುಕೊಳ್ಳುವಂತೆ ವಕೀಲ ಅಮೃತೇಶ್ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂಕ್ತ ಸಮಯ ಇನ್ನೂ ಬಂದಿಲ್ಲ?
ಪೆನ್‌ಡ್ರೈವ್ ರಿಲೀಸ್ ಮಾಡುವ ಸಮಯ ಇನ್ನೂ ಬಂದಿಲ್ಲ, ಕಾಂಗ್ರೆಸ್ ಪರ ತೀರ್ಪು ನೀಡಿದ ಜನತೆಗೆ ಮುಂದೆ ಇನ್ನಷ್ಟು ಆಘಾತಗಳು ಕಾದಿವೆ. ಅವರಿಗೆ ತಮ್ಮ ತಪ್ಪಿನ ಅರಿವಾಗಬೇಕು. ಸೂಕ್ತ ಸಮಯದಲ್ಲಿ ಅದನ್ನು ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಇದುವರೆಗೂ ಪೆನ್‌ಡ್ರೈವ್ ಬಿಡುಗಡೆ ಮಾಡಿಲ್ಲ.