ಪಾತ್ರವೇ ಇರದಿದ್ದರೂ ಪ್ರಕರಣ ದಾಖಲು

29sgr1
ಪರಮೇಶ್ವರ ದೂಗೂರು ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಬಿ.ಆರ್.ಜಯಂತ್, ತೀ.ನ.ಶ್ರೀನಿವಾಸ್, ರವಿ ಕುಗ್ವೆ ಇತರರಿದ್ದರು.
Published on

ಸಾಗರ: ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಮೇಶ್ವರ ದೂಗೂರು ವಿರುದ್ಧ ದಾಖಲಾಗಿರುವ ಐದು ಕೇಸ್‌ಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಸೋಮವಾರ ದೌರ್ಜನ್ಯ ವಿರೋಧಿ ವೇದಿಕೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಕಳೆದ ಎರಡು ದಶಕಗಳಿಂದ ಪರಮೇಶ್ವರ ದೂಗೂರು ದಲಿತರು, ಹಿಂದುಳಿದವರು ಮತ್ತು ನೊಂದವರಿಗೆ ನ್ಯಾಯ ದೊರಕಿಸಿಕೊಡಲು ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಅವರ ಮೇಲೆ ಹಗೆತನ ಸಾಧಿಸಲು ಬೇರೆ ಬೇರೆ ರೀತಿಯ ಪಿತೂರಿ ನಡೆಯುತ್ತಿದೆ. ಕಳೆದ ಒಂದು ತಿಂಗಳಿನಿಂದ ದೂಗೂರು ಮೇಲೆ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ. ದೂಗೂರು ಮೇಲೆ ದಾಖಲಿಸಿರುವ ಐದು ಪ್ರಕರಣಗಳಲ್ಲಿ ಅವರ ಪಾತ್ರವೇ ಇರಲಿಲ್ಲ. ಘಟನೆ ನಡೆದಾಗ ಅವರು ಸ್ಥಳದಲ್ಲಿಯೇ ಇರಲಿಲ್ಲ. ಉದ್ದೇಶಪೂರ್ವಕವಾಗಿ ಹೆಸರನ್ನು ಸೇರಿಸಲಾಗಿದೆ. ಸಂಬಂಧವೇ ಇರದ ಪ್ರಕರಣದಲ್ಲಿ ಹೆಸರನ್ನು ಸೇರಿಸಿ ಕಿರುಕುಳ ನೀಡಲಾಗುತ್ತಿದೆ. ಅವರನ್ನು ಶತಾಯಗತಾಯ ಜೈಲಿಗೆ ಕಳುಹಿಸಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ ಎಂದು ಪದಾಧಿಕಾರಿಗಳು ಆರೋಪಿಸಿದ್ದಾರೆ.
ಪ್ರಮುಖರಾದ ಬಿ.ಆರ್.ಜಯಂತ್, ತೀ.ನ.ಶ್ರೀನಿವಾಸ್, ರವಿ ಕುಗ್ವೆ, ಎಂ.ಬಿ.ಮಂಜಪ್ಪ ಹಿರೇನೆಲ್ಲೂರು, ಅ.ರಾ.ಶ್ರೀನಿವಾಸ್, ಮಂಜುನಾಥ ಬಳಸಗೋಡು, ಧರ್ಮಣ್ಣ, ಗೋಪಾಲಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net