

ಲಿಂಗಸುಗೂರು: ಹಟ್ಟಿ ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳ ತೂಕದಲ್ಲಿ ಮೋಸ ಮಾಡುತ್ತಿರುವ ವರ್ತಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಸಿ ಅವಿನಾಶ ಶಿಂಧೆಗೆ ಕರ್ನಾಟಕ ರಾಜ್ಯ ರೈತ ಸಂಘ ಮಂಗಳವಾರ ಮನವಿ ಸಲ್ಲಿಸಿತು.
ಎಪಿಎಂಸಿ ವರ್ತಕರು ಸರ್ಕಾರದ ನಿಯಮದಂತೆ ತೂಕ ಮಾಡದೆ ಪ್ರತಿ ಚೀಲಕ್ಕೆ 50 ಕೆಜಿ ಬದಲಿಗೆ 53 ಕೆಜಿ ಪಡೆಯುತ್ತಾರೆ. ಡಿ.25 ರಂದು ರೈತರು ಎಪಿಎಂಸಿ ಕಾರ್ಯದರ್ಶಿ ಸವಿತಾ ಪಾಟೀಲ್ ಹಾಗೂ ಹಟ್ಟಿ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಎಪಿಎಂಸಿ ಕಾರ್ಯದರ್ಶಿಯನ್ನು ಅಮಾನತು ಮಾಡಬೇಕು. ಎಪಿಎಂಸಿಯ ಶರಣಬಸವೇಶ್ವರ ಟ್ರೇಡರ್ಸ್, ಶ್ರೀಶೈಲ ಮಲ್ಲಿಕಾರ್ಜುನ ಟ್ರೇಡರ್ಸ್, ಆಯಾನ್ ಟ್ರೇಡರ್ಸ್, ಚಂದುಬಾಬೂ ಟ್ರೇಡರ್ಸ್ ವಿರುದ್ಧ ಪ್ರಕರಣ ದಾಖಲಿಸಿ, ಪರವಾನಗಿ ರದ್ದುಗೊಳಿಸಬೇಕು. ರೈತರಿಗೆ ಆಗಿರುವ ಮೋಸದ ಹಣ ವಾಪಸ್ ನೀಡಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಮಲ್ಲಣ್ಣ ಗೌಡೂರು, ಪ್ರ.ಕಾರ್ಯದರ್ಶಿ ಲಿಂಗಪ್ಪ ಗೌಡನಬಾವಿ, ಪ್ರಮುಖರಾದ ಶಿವರಾಜ ಸರ್ಜಾಪುರ, ಮಹಿಬೂಬ್, ಲಕ್ಷ್ಮಣಗೌಡ ಗುರಿಕಾರ, ಶೌಕತ್, ಗಂಗಾಧರ ನೆಲೋಗಿ, ಲಿಂಗಪ್ಪ ಮಲ್ಲಾಪುರ, ರಮೇಶ ಮಸ್ಕಿ, ಶ್ರೀನಿವಾಸ ಸ್ವಾಮಿ, ದೇವಪ್ಪ, ಶಂಭುನಾಥಗೌಡ ಇದ್ದರು.