

ಕಾರವಾರ: ಉತ್ತರ ಕನ್ನಡ ಜಿಲ್ಲೆಯು ಆನೆಕಾಲು ರೋಗ ಮುಕ್ತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆನೆಕಾಲು ರೋಗ ತೀಕ್ಷ್ಣವಾಗಿರುವ ಪ್ರದೇಶಗಳಲ್ಲಿ 2013 ರ ನಂತರ ಜನಿಸಿದ ಮಕ್ಕಳನ್ನು ತಪಾಸಣೆಗೊಳಪಡಿಸಿದ್ದು, ರೋಗಾಣು ಕಂಡುಬಂದಿಲ್ಲ. ಅಲ್ಲದೇ ಪ್ರತಿ ವರ್ಷ ನಡೆಸುವ ಕೀಟ ಪರೀಕ್ಷೆಯಲ್ಲೂ ರೋಗಾಣು ಕಂಡುಬರುತ್ತಿಲ್ಲ. ಆನೆಕಾಲು ರೋಗವು ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡಲಿದ್ದು, ಈ ಸೊಳ್ಳೆಯು ಕೊಳಚೆ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನಭಿವೃದ್ಧಿ ಮಾಡುತ್ತದೆ. ಆನೆಕಾಲು ರೋಗಕ್ಕೆ ಕಾರಣವಾದ ಪ್ರೌಢ ಹುಳಗಳು ಮನುಷ್ಯನ ದುಗ್ಧರಸ ಗ್ರಂಥಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ತೊಡೆಸಂಧಿಯಲ್ಲಿರುವ ದುಗ್ಧರಸ ಗ್ರಂಥಿಗಳಲ್ಲಿ ಇವು ವಾಸಿಸುವ ಕಾರಣ ಈ ರೋಗದಲ್ಲಿ ಕಾಲುಗಳು ದಪ್ಪ ಆಗುವುದರಿಂದ ಇದನ್ನು ಆನೆಕಾಲು ರೋಗ ಎಂದು ಕರೆಯಲಾಗುತ್ತದೆ.
ದೇಶದಲ್ಲಿ ಆನೆಕಾಲು ರೋಗವನ್ನು 2027 ರ ವೇಳೆಗೆ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಲಾಗಿದ್ದು, ರಾಜ್ಯದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್ ಹಾಗೂ ಕಲಬುರ್ಗಿ ಸೇರಿದಂತೆ ಒಟ್ಟು 9 ಜಿಲ್ಲೆಗಳು ಆನೆಕಾಲು ರೋಗಕ್ಕೆ ಎಂಡಮಿಕ್ ಜಿಲ್ಲೆಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳು ಆನೆಕಾಲು ರೋಗಕ್ಕೆ ಎಂಡಮಿಕ್ ತಾಲೂಕುಗಳಾಗಿದ್ದು, ಅದರಲ್ಲೂ ಕುಮಟಾ ತಾಲೂಕಿನ ಗೋಕರ್ಣ ಹಾಗೂ ಭಟ್ಕಳ ತಾಲೂಕಿನ ನಗರ ಪ್ರದೇಶಗಳು ಎಂಡಮಿಕ್ ಕೇಂದ್ರ ಬಿಂದುಗಳಾಗಿ ಗುರುತಿಸಿಕೊಂಡಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 2004 ನೇ ಇಸವಿಯಲ್ಲಿ ಸಮೀಕ್ಷೆ ನಡೆಸಿದಾಗ ಒಟ್ಟು 348 ಆನೆಕಾಲು ರೋಗಿಗಳು ಹಾಗೂ ಆನೆಕಾಲು ರೋಗದಲ್ಲಿ ಕಾಣಿಸಿಕೊಳ್ಳುವ ಹೈಡ್ರೋಸಿಲ್ ಪ್ರಕರಣಗಳು ಇದ್ದು ಪ್ರಸ್ತುತ 129 ಆನೆಕಾಲು ರೋಗಿಗಳು ಇದ್ದಾರೆ ಹಾಗೂ 418 ಹೈಡ್ರೋಸಿಲ್ ಪ್ರಕರಣಗಳಲ್ಲಿ ಶಸ್ತçಚಿಕಿತ್ಸೆಯನ್ನು ಮಾಡಿಸಲಾಗಿದೆ. ಗೋಕರ್ಣ ಹಾಗೂ ಭಟ್ಕಳ ನಗರ ಪ್ರದೇಶದ ಚರಂಡಿಗಳಲ್ಲಿ ಕೊಳಚೆ ನೀರು ನಿಂತು ಕ್ಯೂಲೆಕ್ಸ್ ಜಾತಿಯ ಸೊಳ್ಳೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತಿದ್ದ ಕಾರಣ ಈ ಪ್ರದೇಶಗಳು ಕೇಂದ್ರ ಬಿಂದುಗಳಾಗಿದ್ದವು.
ಆನೆಕಾಲು ರೋಗದಲ್ಲಿ ಪ್ರೌಢ ಹುಳುಗಳು ಸಂತಾನಭಿವೃದ್ಧಿಗಾಗಿ ಆರಂಭಿಕ ಲಾರ್ವಾ ಹಂತಗಳನ್ನು (ಮೈಕ್ರೋಫೈಲೇರಿಯಾ) ಬಿಡುಗಡೆ ಮಾಡುತ್ತದೆ. ಈ ಮೈಕ್ರೋಫೈಲೇರಿಯಾವು ರಾತ್ರಿ ವೇಳೆಯಲ್ಲಿ ರಕ್ತದ ಚಲನಾ ವ್ಯೂಹದಲ್ಲಿ ಬರುತ್ತದೆ ಹಾಗೂ ದಿನದ ವೇಳೆಯಲ್ಲಿ ದುಗ್ಧರಸ ಗ್ರಂಥಿಗಳಲ್ಲಿ ಇರುತ್ತದೆ. ಆದುದರಿಂದ ಆನೆಕಾಲು ರೋಗವನ್ನು ಪತ್ತೆಹಚ್ಚಲು ರಾತ್ರಿ ವೇಳೆ ರಕ್ತಲೇಪನಗಳನ್ನು ಮಾಡಲಾಗುತ್ತದೆ. ಈ ಮೈಕ್ರೋಫೈಲೇರಿಯಾ ಕ್ಯೂಲೆಕ್ಸ್ ಸೊಳ್ಳೆಗಳು ಮನುಷ್ಯನಿಗೆ ಕಚ್ಚಿದಾಗ ಅವರ ದೇಹಕ್ಕೆ ಹೋಗಿ, ಅಲ್ಲಿ ಸೋಂಕಿತ ಲಾರ್ವಾವಾಗಿ ಬೆಳವಣಿಗೆ ಹೊಂದಿ, ಆರೋಗ್ಯವಂತನಿಗೆ ಕಚ್ಚಿದಾಗ ವ್ಯಕ್ತಿಗೆ ಆನೆಕಾಲು ರೋಗವು ಹರಡುತ್ತದೆ.
ದೇಶದಲ್ಲಿ ಆನೆಕಾಲು ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಇಟ್ಟುಕೊಂಡು 2004 ನೇ ಇಸವಿಯಲ್ಲಿ ರಾಷ್ಟ್ರೀಯ ಮಾರ್ಗಸೂಚಿಯನ್ನು ಹೊರಡಿಸಿದ್ದು, ಈ ಮಾರ್ಗಸೂಚಿಯ ಪ್ರಕಾರ ಆನೆಕಾಲು ರೋಗ ಎಂಡಮಿಕ್ ಇರುವ ಪ್ರದೇಶಗಳಲ್ಲಿರುವ ಎಲ್ಲಾ ವ್ಯಕ್ತಿಗಳಿಗೆ ಆಲ್ಬೆಂಡಜೋಲ್ ಗುಳಿಗೆಗಳನ್ನು ನೀಡುವ ಸಮೂಹ ಔಷಧ ಚಿಕಿತ್ಸೆಯನ್ನು ವರ್ಷಕ್ಕೊಮ್ಮೆ ನೀಡಲು ಪ್ರಾರಂಭಿಸಲಾಯಿತು. ಇದರಿಂದ ಆ ಪ್ರದೇಶದಲ್ಲಿನ ಮೈಕ್ರೋಫೈಲೇರಿಯಾ ಹೊಂದಿರುವ ವ್ಯಕ್ತಿಗಳ ದೇಹದಲ್ಲಿನ ಹುಳುಗಳನ್ನು ನಾಶ ಪಡಿಸುವ ಮೂಲಕ ಖಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಲಾಗುತ್ತಿದೆ. ಈ ಕಾರ್ಯಚಟುವಟಿಕೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ 2004 ರಿಂದ 2013 ರವರೆಗೆ 9 ಸುತ್ತಿನಲ್ಲಿ ನಡೆಸಲಾಗಿತ್ತು ಹಾಗೂ ಪ್ರತೀ ಬಾರಿಯು ಶೇಕಡಾ 98 ಕ್ಕಿಂತ ಹೆಚ್ಚಿನ ಅರ್ಹ ಫಲಾನುಭವಿಗಳಿಗೆ ಮಾತ್ರೆಗಳನ್ನು ನುಂಗಿಸಲಾಯಿತು. ಪ್ರತೀ ಸುತ್ತಿನ ನಂತರ ಆಯ್ದ ಪ್ರದೇಶಗಳಲ್ಲಿ ಮೈಕ್ರೋಫೈಲೇರಿಯಾ ಪತ್ತೆಗಾಗಿ ರಾತ್ರಿ ರಕ್ತಲೇಪನ ಶಿಬಿರಗಳನ್ನು ಹಮ್ಮಿಕೊಂಡು, ರಕ್ತಲೇಪನ ಸಂಗ್ರಹಿಸಿ ಪರೀಕ್ಷಿಸಲಾಯಿತು. 2004 ರಲ್ಲಿ 2% ಇದ್ದ ಮೈಕ್ರೋಫೈಲೇರಿಯಾದ ಸರಾಸರಿ 2013 ರಲ್ಲಿ 0.04ಕ್ಕೆ ಇಳಿಕೆ ಆಯಿತು.
ಇದರಿಂದಾಗಿ ಜಿಲ್ಲೆಯಲ್ಲಿ ಸಮೂಹ ಔಷಧ ಚಿಕಿತ್ಸೆಯನ್ನು ನಿಲ್ಲಿಸುವ ಕುರಿತು ನಿರ್ಧರಿಸಲು, ಈ ಕಾರ್ಯಚಟುವಟಿಕೆ ಪ್ರಾರಂಭಿಸಿದ ನಂತರ ಹುಟ್ಟಿದ ಮಕ್ಕಳಲ್ಲಿ (5-7 ವರ್ಷದ) ಆನೆಕಾಲು ರೋಗ ಇರುವಿಕೆಯನ್ನು ಪತ್ತೆ ಹಚ್ಚಲು ಜಿಲ್ಲೆಯಲ್ಲಿ ಆಯ್ದ ಶಾಲೆಗಳ ಒಂದನೇ ಹಾಗೂ 2ನೇ ತರಗತಿಯ ವಿದ್ಯಾರ್ಥಿಗಳಲ್ಲಿ ರೋಗ ಪ್ರಸಾರ ನಿರ್ಧಾರಣಾ ಸಮೀಕ್ಷೆಯನ್ನು 2015, 2017 ಹಾಗೂ 2019 ರಲ್ಲಿ ಕೈಗೊಳ್ಳಲಾಯಿತು. ಈ ಸಮೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದಿದ್ದು, ಜಿಲ್ಲೆಯಲ್ಲಿ ಆನೆಕಾಲು ರೋಗ ನಿರ್ಮೂಲನೆ ಆಗಿರುವುದು ಖಚಿತವಾಗಿದೆ. ಜಿಲ್ಲೆಯಲ್ಲಿ 2013 ರ ನಂತರ ಸಮೂಹ ಔಷಧ ಚಿಕಿತ್ಸೆಯನ್ನು ನಿಲ್ಲಿಸಲಾಗಿದ್ದು, ಆನೆಕಾಲು ರೋಗ ನಿರ್ಮೂಲನೆಯ ದೃಢೀಕರಣ ಪತ್ರಕ್ಕಾಗಿ ಅವಶ್ಯವಿರುವ ದಾಖಲೆಗಳನ್ನು ಈಗಾಗಲೇ ಕೇಂದ್ರ ಕಛೇರಿಗೆ ಸಲ್ಲಿಸಲಾಗಿದ್ದು, ದೃಢೀಕರಣ ಪತ್ರ ಸಿಗುವುದು ಮಾತ್ರ ಬಾಕಿ ಇರುತ್ತದೆ.
ಜಿಲ್ಲೆಯಲ್ಲಿ ಪ್ರಸ್ತುತ ಇರುವ 129 ಆನೆಕಾಲು ರೋಗಿಗಳಿಗೆ ಪ್ರತೀ ವರ್ಷ ತಮ್ಮ ರೋಗಬಾಧಿತ ಅವಯವಗಳ ರಕ್ಷಣೆಯ ಕುರಿತು ತರಬೇತಿಯನ್ನು ನೀಡಲಾಗುತ್ತಿದೆ. ಮತ್ತೊಮ್ಮೆ ಆನೆಕಾಲು ರೋಗ ಮರುಕಳಿಸದಂತೆ ತಡೆಯಲು ಜಿಲ್ಲೆಗೆ ಮೀನುಗಾರಿಕೆ/ ಕಟ್ಟಡ ಕಾಮಗಾರಿಗೆ ಆನೆಕಾಲು ಎಂಡಮಿಕ್ ರಾಜ್ಯಗಳಿಂದ ಬರುವ ಕಾರ್ಮಿಕರಿಗೆ ರಾತ್ರಿ ರಕ್ತ ಲೇಪನ ಸಂಗ್ರಹಣ ಶಿಬಿರಗಳನ್ನು ನಡೆಸಿ, ಪರೀಕ್ಷೆ ನಡೆಸಿ ಮೈಕ್ರೋಫೈಲೇರಿಯಾ ಕಂಡು ಬರುವ ವ್ಯಕ್ತಿಗಳಿಗೆ 12 ದಿನದ ಆಇಅ ಮಾತ್ರೆಗಳ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತೀ ವರ್ಷ ಆಯ್ದ ಸ್ಥಳಗಳಲ್ಲಿ 5 ರಿಂದ 9 ವರ್ಷ ವಯೋಮಾನದ ಮಕ್ಕಳನ್ನು ಕೂಡಾ ರಕ್ತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 2013 ರಿಂದ ಇತ್ತಿಚೆಗೆ ಸದ್ರಿ ವಯೋಮಾನದ ಪರೀಕ್ಷೆಗೆ ಒಳಪಡಿಸಿದ ಮಕ್ಕಳಲ್ಲಿ ಮೈಕ್ರೋಫೈಲೇರಿಯಾ ಕಂಡು ಬಂದಿರುವುದಿಲ್ಲ. ವರ್ಷಕ್ಕೊಂದು ಬಾರಿ ಅಯ್ದ ಪ್ರದೇಶಗಳಲ್ಲಿ ಕ್ಯೂಲೆಕ್ಸ್ ಸೊಳ್ಳೆಗಳಲ್ಲಿ ಮೈಕ್ರೋಫೈಲೇರಿಯಾದ ವಿವಿಧ ಹಂತಗಳಲ್ಲಿ ಇರುವಿಕೆಯನ್ನು ಪತ್ತೆ ಹಚ್ಚಲು ಸೊಳ್ಳೆಗಳನ್ನು ಕೀಟಶಾಸ್ತಿçÃಯ ಅಧ್ಯಯನವನ್ನು ಕೂಡಾ ನಡೆಸಲಾಗುತ್ತಿದ್ದು 2013 ರಿಂದ ಇದುವರೆಗೆ ಯಾವುದೇ ಸೊಳ್ಳೆಗಳಲ್ಲಿ ಧನಾತ್ಮಕ ಫಲಿತಾಂಶ ಕಂಡು ಬಂದಿರುವುದಿಲ್ಲ. : ಡಾ. ರಮೇಶ್ ರಾವ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಉತ್ತರ ಕನ್ನಡ ಜಿಲ್ಲೆ.