ನಮ್ಮ ಹಕ್ಕುಗಳಿಗಾಗಿ ಹೋರಾಟ ಅಗತ್ಯ: ರವಿ ಡಿ.ಚನ್ನಣ್ಣನವರ್

9
Published on

ಮೈಸೂರು: ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನೂ ಹೋರಾಟ ಮಾಡಿಯೇ ಪಡೆಯಬೇಕಾದ ಸ್ಥಿತಿ ಇದ್ದು, ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲೇ ಬೇಕಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ರವಿ ಡಿ.ಚನ್ನಣ್ಣನವರ್ ಹೇಳಿದರು.

ಕರ್ನಾಟಕ ರಾಜ್ಯ ನಾಯಕರ ಯುವ ಸೇನೆಯಿಂದ ವಿಜಯನಗರದ ವಾಲ್ಮೀಕಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ 2024-25ನೇ ಸಾಲಿನ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 22ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸವಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ನಾಯಕ ಜನಾಂಗ 4ನೇ ಸ್ಥಾನದಲ್ಲಿದೆ. ವರ್ತಮಾನ ಕಾಲದಲ್ಲಿ ದೊಡ್ಡ ಅಸಡ್ಡೆಯಿಂದ ನಾವೆಲ್ಲ ಕಾಲ ಕಳೆಯುತ್ತಿದ್ದೇವೆ. ಹೀಗಾಗಿ ನಮ್ಮ ಹಕ್ಕುಗಳ ಬಗ್ಗೆ ಬಹುದೊಡ್ಡ ಶೂನ್ಯವಾದಂತಾಗಿದೆ. ಇದನ್ನು ಮನಗಂಡು ವಿದ್ಯೆ ಕಲಿಸಿದ ಗುರುವಿಗೆ ಬೆರಳನ್ನು ಕತ್ತರಿಸಿಕೊಟ್ಟ ಏಕಲವ್ಯನಾಗುವ ಬದಲಿಗೆ ಮದಕರಿನಾಯಕನಾಗಿ ಅನ್ಯಾಯ, ದೌರ್ಜನ್ಯದ ವಿರುದ್ಧ ಹೋರಾಟ ಮಾಡಬೇಕು ಎಂದರು.

ಆದ್ದರಿಂದ ನಾವು ಹಳೆಯ ಕಾಲದ ನಮ್ಮ ಹಿರಿಯರ ಬಿರುದುಗಳನ್ನು ಹೇಳಿಕೊಂಡು ಕೂರುವ ಬದಲಿಗೆ ಇನ್ನೊಂದು ಹೋರಾಟದ ಅವಶ್ಯಕತೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡಿ ಪಡೆಯುವುದು ಹೆಚ್ಚು. ಹಾಗಾಗಿ ಹೋರಾಡಿಯೇ ನಮ್ಮ ಹಕ್ಕು ಪಡೆಯಬೇಕು ಎಂದರು.

ಬರಿ ಐಪಿಎಸ್, ಐಎಎಸ್ ಅಧಿಕಾರಿಗಳಾಗಬೇಕು ಎಂದು ಕಾಲ ಕಳೆಯಬೇಡಿ. ಪರೀಕ್ಷೆ ಬರೆಯುವ 15 ಲಕ್ಷ ಜನರಲ್ಲಿ 250 ಜನರಿಗೆ ಅವಕಾಶ ಸಿಗಲಿದೆ. ಅದರಲ್ಲಿ ಪರಿಶಿಷ್ಟ ಜಾತಿಗೆ 18, ಪರಿಶಿಷ್ಟ ಪಂಗಡಕ್ಕೆ 7, ಹಿಂದುಳಿದ ವರ್ಗಕ್ಕೆ 32 ಸ್ಥಾನಗಳು ದೊರೆಯಲಿವೆ. ಈ ಸ್ಥಾನಗಳನ್ನು ಪಡೆಯಲು ನಾವು ಓದಿ ಓದಿ ಹೈರಣಾಗುವ ಬದಲಿಗೆ ಸ್ವಯಂ ಉಳುಮೆ, ಎರಡು ಕುರಿ, ಎತ್ತು ಮೇಯಿಸಿದರೆ ಸಾಕು. ಸರ್ಕಾರಿ ಉದ್ಯೋಗಗಳನ್ನು ನಂಬಿ ಕೂರುವ ಅಗತ್ಯವಿಲ್ಲ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಯ ನೀಡಿ ಕೊನೆಗೆ ವಿಫಲವಾಗಿ ಕೂರುವುದಕ್ಕಿಂತ ಗ್ರಾಮ ಪಂಚಾಯಿತಿಗೆ ಸ್ಪರ್ಧೆ ಮಾಡುವ ಮೂಲಕ ರಾಜಕೀಯ ಪ್ರವೇಶ ಮಾಡಿ. ಸಮಾಜದಲ್ಲಿ ಆರ್ಥಿಕ ರಾಜಕೀಯ, ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿ. ರಾಜ್ಯ, ಜಿಲ್ಲೆ, ನಿಮ್ಮೂರಿಗೆ ಬರುವ ಬಜೆಟ್ ಎಷ್ಟು. ಅದರಲ್ಲಿ ಎಷ್ಟು ಬಂದಿತು ಎನ್ನುವುದನ್ನು ನೋಡಬೇಕು ಎಂದು ಸಲಹೆ ನೀಡಿದರು.

ದೇಶ ಸಂವಿಧಾನ, ಇತಿಹಾಸದ ಪುಟಗಳ ಚರಿತ್ರೆ ಕುರಿತು ಜನರಿಗೆ ಗೊತ್ತಾಗಬೇಕು. ಮದಕರಿ ನಾಯಕರ ಚರಿತ್ರೆ ಬಹಳ ದೊಡ್ಡದಿದೆ. ಹದಿನೇಳು ರಾಜರು ಆಡಳಿತ ಮಾಡಿದ್ದಾರೆ. ಅದೇ ರೀತಿ ಆಳ್ವಿಕೆ ಪ್ರಜಾಪ್ರಭುತ್ವದಲ್ಲಿಯೂ ಮರುಕಳಿಸುವಂತೆ ಮಾಡಬೇಕು ಎಂದು ಹೇಳಿದರು.

ಕೇವಲ ಮಾತಿಗಿಂತ ಕ್ರಿಯೆ ಮುಖ್ಯ. ನಮ್ಮ ವಿಚಾರಗಳಿಗೆ ಅಂತಿಮವಾಗಿ ನಿಧಾನವಾಗಿಯಾದರೂ ಸಫಲತೆ ಸಿಗಲಿದೆ. ನಂಜುಂಡೇಶ್ವರ, ಚಾಮುಂಡೇಶ್ವರಿ, ಮಂಟೇಸ್ವಾಮಿ, ಮಹದೇಶ್ವರರ ನೆಲವಾಗಿರುವುದು ಈ ಮಣ್ಣು ಸಂತರು ಮತ್ತು ಹೋರಾಟಗಾರರ ಹೋರಾಟದ ನೆಲವಾಗಿದೆ. ಮುಂದಿನ ಮೂವತ್ತು, ನಲವತ್ತು ವರ್ಷಗಳ ಕಾಲದಲ್ಲಿ ದೊಡ್ಡ ಬದಲಾವಣೆಯ ಘಟ್ಟವಾಗಿದ್ದು, ಸುಮ್ಮನೆ ಕೂತರೆ ಸತ್ತ ಶವಕ್ಕೆ ಸಮನಾಗಬೇಕಾಗುತ್ತದೆ ಎಂದರು.

ರಾಜಕಾರಣಿ ಅದವರಿಗೆ ತಾಯಿ ಹೃದಯ ಇರಬೇಕು. ಬೀದಿಯಲ್ಲಿ ಹೋಗುವ ಮಗುವಿಗೆ ಶಾಲೆ ಸೀಟು, ಉದ್ಯೋಗ ದೊರೆಯದಿದ್ದರೆ ನನ್ನ ಮಕ್ಕಳಿಗೆ ಸೀಟು ಸಿಗಲಿಲ್ಲ ಎನ್ನುವ ಭಾವನೆ ಇರಬೇಕು. ಬಡವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಹೇಳಿದರು. ಶಾಸಕರಾದ ಕೆ.ಹರೀಶ್‌ಗೌಡ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎನ್.ಮಂಜೇಗೌಡ, ಡಾ.ಯತೀಂದ್ರ, ಮಾಜಿ ಎಂಎಲ್‌ಸಿ ಸಿದ್ದರಾಜು, ಮುಖಂಡರಾದ ಎಸ್.ಸಿ.ಬಸವರಾಜು, ಅಪ್ಪಣ್ಣ, ನಗರಪಾಲಿಕೆ ಮಾಜಿ ಸದಸ್ಯ ಲೋಕೇಶ್ (ಪಿಯಾ), ದೇವರಾಜ್ ಕಾಟೂರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net