

ಚನ್ನಮ್ಮನ ಕಿತ್ತೂರು: ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿಗರ ಮೇಲೆ ಲಾಠಿ ಪ್ರಹಾರ ನಡೆಸುವ ಮೂಲಕ ಹೋರಾಟ ಹತ್ತಿಕ್ಕುವ ಕಾರ್ಯವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿದೆ ಎಂದು ಸಮುದಾಯದ ತಾಲೂಕಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.
ಪಟ್ಟಣದ ಹೆದ್ದಾರಿ ಪಕ್ಕದ ಚನ್ನಮ್ಮಾಜಿ ವೃತ್ತದಲ್ಲಿ ಗುರುವಾರ ಮಾನವ ಸರಪಳಿ ನಿರ್ಮಿಸಿ, ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಅವರು, ಬಿಜೆಪಿ ಸರ್ಕಾರ ಇದ್ದಾಗಲೂ ನಮಗೆ ಸಿಗಬೇಕಾದ ಮೀಸಲಾತಿಗಾಗಿ ಪಾದಯಾತ್ರೆ ಹೋರಾಟ ಕೈಗೊಳ್ಳಲಾಗಿತ್ತು. ಆದರೆ ಅವರು ಕಾಂಗ್ರೆಸ್ ಸರ್ಕಾರದಂತೆ ಲಾಠಿಚಾರ್ಜ್‌ನಂತಹ ದುಷ್ಕೃತ್ಯ ಎಸಗಿರಲಿಲ್ಲ ಎಂದು ಆರೋಪಿಸಿದರು.
ಪಪಂ ಮಾಜಿ ಸದಸ್ಯ ಕಿರಣ ವಾಳದ ಮಾತನಾಡಿ, ಶಿಕ್ಷಣ, ಉದ್ಯೋಗಕ್ಕಾಗಿ ಬಡ ಕುಟುಂಬಗಳ ಮಕ್ಕಳು ಮೀಸಲಾತಿ ಇಲ್ಲದಿರುವ ಕಾರಣ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದೇವೆ ಎಂದರು. ಪಂಚಮಸಾಲಿ ವಕೀಲರ ಸಂಘದ ಅಧ್ಯಕ್ಷ ಶಿವಾನಂದ ಬೋಗೂರ, ವಕೀಲರಾದ ಎಸ್.ಎಸ್. ಸವದತ್ತಿ, ರಾಜು ಬುಡಶೆಟ್ಟಿ, ಮುಖಂಡರಾದ ಕಿರಣ ಪಾಟೀಲ, ಕಲ್ಲಪ್ಪ ಕುಗಟಿ, ನಾಗೇಶ ಬೆಣ್ಣಿ ಮಯೂರ ಗಿರಿಯಾಲ, ಅನಿಲ ಎಮ್ಮಿ , ಸಂಗಮೇಶ ನರಗುಂದ, ವಿರೂಪಾಕ್ಷಗೌಡ ಪಾಟೀಲ, ಪ್ರವೀಣ ಜಕ್ಕನಗಡರ, ಬಸವರಾಜ ಮಾತನವರ, ಉಮೇಶ ಹುಂಬಿ, ಬಸವರಾಜ ಮಾತನವರ, ಬಸವರಾಜ ಅವರಾದಿ ಇತರರಿದ್ದರು.