ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ - ಡಾ.ಪ್ರಭಾಕರ ಕೋರೆ

02
Published on

ಬೆಳಗಾವಿ: ಅಸಂಖ್ಯ ಹೋರಾಟಗಾರರು ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟರು. ಅವರು ಸದಾ ಸ್ಮರಣೀಯರು. ಅವರೆಲ್ಲರನ್ನೂ ಆ.15ರಂದು ಮಾತ್ರವಲ್ಲ ದಿನವೂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ನಗರದಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಂಗಳವಾರ 77ನೇ ಸ್ವಾತಂತ್ರೊೃೀತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 76 ವರ್ಷಗಳಲ್ಲಿ ಭಾರತ ಅಗಾಧ ಸಾಧನೆ ಮಾಡಿದೆ. ಜಗತ್ತು ಇಂದು ಭಾರತದತ್ತ ತಿರುಗಿ ನೋಡುವಂತೆ ಮುನ್ನಡೆದಿದೆ ಎಂದರು.
ಪರಕೀಯರ ಆಳ್ವಿಕೆಯಲ್ಲಿ ಬಡತನ ರೇಖೆಯ ಕೆಳಗೆ ಇದ್ದೆವು. ಇಂದು ಆ ಸ್ಥಿತಿ ಬದಲಾಗಿದೆ.

ಎಲ್ಲ ಕ್ಷೇತ್ರಗಳಲ್ಲಿ ಭಾರತ ಪ್ರಕಾಶಿಸುತ್ತಿದೆ. ಜನನಾಯಕರು ಪಕ್ಷಾತೀತವಾಗಿ ದೇಶ ಕಟ್ಟುವ ಕೆಲಸ ಮಾಡಬೇಕಾಗಿದೆ. ಇಂದು ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ್ದೇವೆ. ಅದು ಮತ್ತಷ್ಟು ಹೆಚ್ಚಾಗಬೇಕಾಗಿದೆ. ಯುವಜನರಿಗೆ ದೇಶಾಭಿಮಾನ ಮೂಡಿಸುವ ಕೆಲಸ ನಡೆಯಬೇಕು. ದೇಶ ಮೊದಲು ಎಂಬ ಪ್ರಜ್ಞೆ ಮತ್ತು ಅಸ್ಮಿತೆ ಇಂದಿನ ಅಗತ್ಯ ಎಂದರು.

ಅ.22ರಿಂದ ಮಧ್ಯಪ್ರದೇಶದ ಮಾವೋದಲ್ಲಿ ಜರುಗಲಿರುವ ರಾಷ್ಟ್ರಮಟ್ಟದ ಜಿ.ವಿ.ಮಾಲ್ವಂಕರ ಶೂಟಿಂಗ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾದ ಸಿನಿಯರ್ ಕೆಡೆಟ್‌ಗಳಾದ ಪ್ರೀತಿ ಚಂದ್ರಶೇಖರಯ್ಯ ಸವದಿ ಹಾಗೂ ಗುರುನಾಥ ಲಕ್ಷ್ಮಣ ರಾಜೋಳಿ ಅವರನ್ನು ಡಾ.ಪ್ರಭಾಕರ ಕೋರೆ ಅಭಿನಂದಿಸಿದರು.

ಈಚೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಅಂತರವಲಯ ಕ್ರೀಡಾಕೂಟದಲ್ಲಿ ಸತತ 8ನೇ ಸಲ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡ ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳನ್ನು ಹಾಗೂ ಬೆಳಗಾವಿ, ಹುಬ್ಬಳ್ಳಿ, ಅಂಕಲಿ ಹಾಗೂ ಧಾರವಾಡ ಕೇಂದ್ರಗಳಲ್ಲಿ ಜರುಗಿದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 4ನೇ ಸಲ ವೀರಾಗ್ರಣಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಿದರು.

ಪ್ರಾಚಾರ್ಯ .ಎಚ್.ಎಸ್.ಮೇಲಿನಮನಿ, ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಡಾ.ಮಹೇಶ ಗುರನಗೌಡರ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮರಾವ್, ಎನ್‌ಎಸ್‌ಎಸ್ ಅಧಿಕಾರಿ ಡಾ.ಎಚ್.ಎಂ.ಚನ್ನಪ್ಪಗೋಳ, ಸಾಂಸ್ಕೃತಿಕ ವಿಭಾಗದ ಸಂಯೋಜಕಿ ಡಾ.ರೇಣುಕಾ ಕಠಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net