

ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜದ ವಿಚಾರವಾಗಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಯಿತು. ಅಂದು ಕಾನೂನಿನ ಬಗ್ಗೆ ಅರಿವು ಮೂಡಿಸದ ಅಧಿಕಾರಿಗಳ ನಡೆಯಿಂದ ಆ ಬೆಳವಣಿಗೆ ನಡೆಯಿತು. ಆದರೆ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದಾಗಿ ಶಾಸಕ ರವಿಕುಮಾರ್ ಗಣಿಗ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಹನುಮ ಧ್ವಜ ಹೋರಾಟಗಾರ ಮರಲಿಂಗನದೊಡ್ಡಿ ಯೋಗೇಶ್ ಹೇಳಿದರು.
ತಾಲೂಕಿನ ಕೆರಗೋಡು ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ನಾನು ಅರ್ಜಿದಾರನಾಗಿದ್ದೆ. ಆದರೆ ಸಮಾಜದ ನೆಮ್ಮದಿ ಮತ್ತು ಸೌಹಾರ್ದ ಭಾವನೆಯನ್ನು ಹೊಂದುವುದರ ಜತೆಗೆ ಕೆರಗೋಡು ಭಾಗದ ಅಭಿವೃದ್ಧಿಯಾಗಬೇಕು. ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಶಾಸಕರಿಗೆ ನಾವು ಬೆಂಬಲವನ್ನು ವ್ಯಕ್ತಪಡಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮದಲ್ಲಿ ವಿವಾದ ಬಳಿಕ ನಡೆದ ಬೆಳವಣಿಗೆ ನೋಡಿದಾಗ ನಮ್ಮ ಭಾಗದಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿತ್ತು. ನಾವೆಲ್ಲ ಒಂದೇ ಸಮಾಜದ ಅಡಿಯಲ್ಲಿ ಜೀವನ ಮಾಡುತ್ತಿರುವಾಗ ಜಾತಿ ಮತ್ತು ಧರ್ಮಗಳ ವಿಚಾರದಲ್ಲಿ ಸೌಹಾರ್ಧತೆಗೆ ಭಂಗ ತರುವುದು ಬೇಡ ಎಂಬುದು ನಮ್ಮ ಅರಿವಿಗೆ ಬಂದಿದೆ. ಹಿಂದುಗಳಾದ ನಾವು ಈಗಲೂ ಹನುಮ ಧ್ವಜದ ಪರವಾಗಿದ್ದರೂ, ಸ್ಥಳೀಯವಾಗಿ ಕೆಲವರು ಷಡ್ಯಂತ್ರ ನಡೆಸಿ ರಾಜಕೀಯಗೊಳಿಸಲು ಯತ್ನಿಸಬಹುದು. ಆದರೆ ನಮಗೆ ಸಮಾಜದ ಸ್ವಾಸ್ಥ್ಯ ನೆಮ್ಮದಿ, ಅಭಿವೃದ್ಧಿ ಮುಖ್ಯ. ಈ ನಿಟ್ಟಿನಲ್ಲಿ ಜನರ ಮನಸ್ಥಿತಿ ಬದಲಾಗಬೇಕು. ಹಲವು ಯುವಕರ ಮೇಲೆ ಹಾಕಿರುವ ಕೇಸ್‌ಗಳಿಂದಲೂ ಹೊರಬರಬೇಕಾಗಿದೆ. ಅದಕ್ಕೆ ಶಾಸಕರ ಬೆಂಬಲವೂ ಬೇಕಾಗಿದೆ ಎಂದು ಮನವಿ ಮಾಡಿದರು.
ಶಾಸಕ ರವಿಕುಮಾರ್ ಗಣಿಗ ಕೆರಗೋಡು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪುರಸಭೆಯನ್ನಾಗಿ ಕ್ರಮ ವಹಿಸುತ್ತಿದ್ದಾರೆ. ಜತೆಗೆ ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತ ನಿಲುವನ್ನು ಹೊಂದಿದ್ದಾರೆ. ಇದರ ಮುಂದೆ ಉಳಿದ ವಿಷಯಗಳು ನಗಣ್ಯ. ಆ ಒಂದು ನಿಟ್ಟಿನಲ್ಲಿ ಶಾಸಕರ ಕಾರ್ಯವೈಖರಿ ನಮಗೆ ತೃಪ್ತಿ ಕೊಡುತ್ತಿದೆ. ಕೆರಗೋಡು ಹನುಮ ಧ್ವಜದ ಪ್ರಕರಣದಲ್ಲಿ ಶಾಸಕರ ಪಾತ್ರವಿಲ್ಲ. ಅವರು ಯಾವುದೇ ಜಾತಿ ಮತ್ತು ಧರ್ಮದ ವಿರೋಧಿಗಳಲ್ಲ ಎಂಬುದನ್ನು ತಿಳಿದು ಬೆಂಬಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್.ರಾಜೇಶ್ ಇದ್ದರು.