ವಿವಿ ವಿವಾದ ಅಭಿಪ್ರಾಯ ಸಂಗ್ರಹ: ಮಂಡ್ಯ ವಿಶ್ವವಿದ್ಯಾನಿಲಯ ಉಳಿಸಿಕೊಳ್ಳಲು ಹೋರಾಟ

Fight to save Mandya University Mandya
Published on

ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯವನ್ನು ಮತ್ತೆ ಮೈಸೂರು ವಿವಿಗೆ ವಿಲೀನಗೊಳಿಸಬೇಕೆನ್ನುವ ರಾಜ್ಯಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಮಂಡ್ಯ ವಿವಿ ಉಳಿಸಿಕೊಳ್ಳಲು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಸಂಘಟನೆಗಳು ಮುಂದಾಗಿವೆ.

ಯಾವುದೇ ಸೂಚನೆ ನೀಡದೇ ಏಕಾಏಕಿ ವಿವಿ ವಿಲೀನಗೊಳಿಸುವ ಪ್ರಕ್ರಿಯೆಗೆ ರಾಜ್ಯಸರ್ಕಾರ ಚಾಲನೆ ನೀಡಿದೆ. ಪರಿಣಾಮ ಸಾವಿರಾರೂ ವಿದ್ಯಾರ್ಥಿಗಳು ಹಾಗೂ ಉನ್ನತ ವ್ಯಾಸಂಗದ ಕನಸನ್ನೊತ್ತಿಕೊಂಡಿರುವವರಿಗೆ ಆತಂಕ ತಂದೊಡ್ಡಿದೆ. ಮಂಡ್ಯ ವಿವಿ ಮತ್ತೆ ಮೈಸೂರು ಸೇರಿಕೊಂಡರೆ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗೆ ಸಮಸ್ಯೆಯಾಗಲಿದೆ. ಪ್ರತಿ ಕೆಲಸಕ್ಕೂ ಮೈಸೂರಿನತ್ತ ಮುಖ ಮಾಡಬೇಕಿದೆ. ಇದೆಲ್ಲದಕ್ಕೂ ಮುಖ್ಯವಾಗಿ ಈಗಷ್ಟೇ ಪ್ರಗತಿಯ ಹಾದಿಯಲ್ಲಿರುವ ಮಂಡ್ಯ ವಿವಿಯ ಅಸ್ಮಿತೆಗೆ ಕೊಡಲಿಪೆಟ್ಟು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ವಿವಿ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿವೆ.

ಈ ನಿಟ್ಟಿನಲ್ಲಿ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಇಲ್ಲಿ ಭಾಗವಹಿಸಿದ್ದ ಹಲವು ಸಂಘಟನೆ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಲ್ಲದೆ, ರಾಜ್ಯಸರ್ಕಾರದ ನಿಲುವಿನ ಬಗ್ಗೆ ಅಸಮಾಧಾನ ಹೊರಹಾಕಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಮಂಡ್ಯ ವಿವಿ ಕೆಲವೇ ವರ್ಷದಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ವಿದ್ಯಾರ್ಥಿಗಳ ದೃಷ್ಟಿಯಿಂದ ವಿಶ್ವವಿದ್ಯಾಲಯ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕಳೆದ ಐದು ವರ್ಷದ ಹಿಂದೆ ಮಂಡ್ಯ ವಿಶ್ವವಿದ್ಯಾಲಯ ರಚನೆಯಾಗಿದ್ದು, ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಕ್ರೀಡೆ, ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ವಿಭಾಗದಲ್ಲಿ ಹೆಸರು ಮಾಡಿದೆ. ಇಂತಹ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಮಂಡ್ಯ ವಿವಿ ಆಗಿರುವುದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಮೈಸೂರು ವಿವಿಯ ಮಾದರಿಯಲ್ಲಿ ಬೆಳೆಯುವ ಎಲ್ಲ ಲಕ್ಷಣಗಳಿವೆ. ಪ್ರಸ್ತುತ 4,500 ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಮೈಸೂರು ವಿವಿಗೆ ವಿಲೀನವಾದರೆ ಇವರೆಲ್ಲರಿಗೂ ತೊಂದರೆಯಾಗಲಿದೆ. ಹಾಗಾಗಿ ಮಂಡ್ಯ ವಿಶ್ವವಿದ್ಯಾಲಯವಾಗಿಯೇ ಮುಂದುವರೆಯಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಮಂಡ್ಯ ನಗರದ ಮಹಾವಿದ್ಯಾಲಯದ ಆವರಣದಲ್ಲಿರುವ ಭವ್ಯ ಕಟ್ಟಡಗಳು, ವಿದ್ಯಾರ್ಥಿಗಳು ಎಲ್ಲವೂ ಇಲ್ಲಿಯೇ ಇರಲಿವೆ. ಈ ಬಗ್ಗೆ ಯಾರಿಗೂ ಆತಂಕ ಬೇಡ. ಮೈಸೂರು ವಿವಿ ವ್ಯಾಪ್ತಿಯೊಳಗೆ ಕಾರ್ಯ ನಿರ್ವಹಿಸಲಿವೆ ಅಷ್ಟೆ ಎಂದು ವಿಲೀನದ ವಿಷಯದ ಪರವಾಗಿ ಪ್ರತಿಪಾದಿಸಿದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಶಂಕರೇಗೌಡ, ಮಂಡ್ಯ ವಿವಿ ಉಳಿವಿಗೆ ರಾಜಕಾರಣಿಗಳ ಇಚ್ಛಾಸಕ್ತಿಯೂ ಮುಖ್ಯ. ಮಂಡ್ಯ ವಿವಿಯನ್ನು ಕೊಟ್ಟು ಕಿತ್ತುಕೊಳ್ಳುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಿವೃತ್ತ ಉಪನ್ಯಾಸಕ ಕೀಲಾರ ಜಯರಾಂ ಮಾತನಾಡಿ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಮಂಡ್ಯ ವಿವಿ ಉಳಿಸುವ ನಿಟ್ಟಿನಲ್ಲಿ ತಿರ್ಮಾನ ಕೈಗೊಳ್ಳೋಣ ಎಂದು ಸಲಹೆ ನೀಡಿದರು.

ಪ್ರಾಂಶುಪಾಲೆ ಡಾ.ಸುಮರಾಣಿ ಶಂಭು ಮಾತನಾಡಿ, ಮಂಡ್ಯ ವಿವಿ ಒಂದು ಅಸ್ಮಿತೆ ಇದ್ದ ಹಾಗೆ. ಮಂಡ್ಯ ವಿವಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಹೋರಾಟ ನಡೆಸಬೇಕಿದೆ. ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮಾತನಾಡಿ, ಹಲವು ವರ್ಷಗಳಿಂದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಖಂಡಿಸಿ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಮುಂದೆಯೂ ಸಹ ಮಂಡ್ಯ ವಿವಿ ಉಳಿವಿಗೆ ಯಾವುದೇ ಹೋರಾಟಕ್ಕೂ ಸಿದ್ದ. ಮಂಡ್ಯ ವಿಶ್ವವಿದ್ಯಾಲಯ ಉಳಿದುಕೊಳ್ಳಬೇಕು. ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗ ಸೇರಿದಂತೆ ಜಿಲ್ಲೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸೋಣ. ಜತೆಗೆ ಮಂಡ್ಯ ವಿಶ್ವವಿದ್ಯಾನಿಲಯ ಉಳಿಸುವಲ್ಲಿ ನಮಗೆ ಯಾವ ರಾಜಕೀಯ ಬೇಡ. ಒಟ್ಟಿನಲ್ಲಿ ಮಂಡ್ಯ ವಿವಿ ಉಳಿಸಿಕೊಳ್ಳಬೇಕು. ಪ್ರೊ.ಬಿ.ಜಯಪ್ರಕಾಶಗೌಡ ಕರ್ನಾಟಕ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net