

ಸಾಗರ: ಸಾಗರ ಕಂದಾಯ ಉಪವಿಭಾಗ ವ್ಯಾಪ್ತಿಯ ಹೊಸನಗರ ತಾಲೂಕು ನಗರ ಹೋಬಳಿಯ ಕಟ್ಟೆಕೊಪ್ಪ ಗ್ರಾಮದ ನೂರಾರು ಎಕರೆ ದಟ್ಟ ಅರಣ್ಯ ಪ್ರದೇಶ ಖಾಸಗಿಯವರ ಪಾಲಾಗದಂತೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಬೇಕು ಎಂದು ಒತ್ತಾಯಿಸಿ ಗುರುವಾರ ಸಂಜೆ ವೃಕ್ಷಲಕ್ಷ ಆಂದೋಲನದ ಪ್ರಮುಖರು ಸಾಗರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಹೊಸನಗರ ತಾಲೂಕು ಕಟ್ಟೆಕೊಪ್ಪ ಗ್ರಾಮದ 300 ಎಕರೆ ಕಂದಾಯ ಅರಣ್ಯ ವಿನಾಶದ ಅಂಚಿನಲ್ಲಿದೆ. ಕಳೆದ ಎರಡು ವರ್ಷಗಳಿಂದ ವೃಕ್ಷಲಕ್ಷ ಆಂದೋಲನ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಮತ್ತು ಕಂದಾಯ ಇಲಾಖೆ ಗಮನ ಸೆಳೆಯುತ್ತಿದೆ. ಇದೀಗ ಖಾಸಗಿ ವ್ಯಕ್ತಿಗಳು ಹೈಕೋರ್ಟ್‌ನಲ್ಲಿ ಕೇಸ್ ಹಾಕಿ, ಜಾಗವನ್ನು ತಮ್ಮ ಪರ ಮಾಡಿಕೊಂಡಿದ್ದಾರೆ. 2 ತಿಂಗಳಲ್ಲಿ ಕಂದಾಯ ಅರಣ್ಯವನ್ನು ಖಾಸಗಿಯವರಿಗೆ ನೀಡಲು ಆದೇಶವಾಗಿದೆ. ತಕ್ಷಣ ಕಂದಾಯ ಮತ್ತು ಅರಣ್ಯ ಇಲಾಖೆ ಇದರ ವಿರುದ್ಧ ಕಾನೂನು ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.
ಕಟ್ಟೆಕೊಪ್ಪ ಗ್ರಾಮದ ಇನ್ನೊಂದು ಪ್ರಕರಣದಲ್ಲೂ ಖಾಸಗಿ ಹೆಸರಿಗೆ 350 ಎಕರೆ ಕಾನು ಭೂಮಿ ಇದೆ. ಇದನ್ನು ಸರ್ಕಾರ ವಶಕ್ಕೆ ಪಡೆದು ಅರಣ್ಯ ಸಂರಕ್ಷಣೆ ಮಾಡಬೇಕು. ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಮಂಡಗಳಲೆ ಗ್ರಾಮದ ವರದಾ ನದಿ ತೀರದ ಜೌಗು ಭೂಮಿಯಲ್ಲಿ ಸುಮಾರು 250 ಎಕರೆ ಗೋಮಾಳವಿದೆ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು ಕೆಲವು ಖಾಸಗಿ ವ್ಯಕ್ತಿಗಳು ಈ ಪ್ರದೇಶವನ್ನು ಕಬಳಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದರೂ ಕಂದಾಯ, ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಪರಿಸರ, ಜೀವವೈವಿಧ್ಯ ಕಾಯ್ದೆ ಉಲ್ಲಂಘನೆಯಾಗುತ್ತಿದೆ. ತಕ್ಷಣ ಜೌಗು ಅರಣ್ಯ, ಕಂದಾಯ ಅರಣ್ಯ ಸಂರಕ್ಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೊಸನಗರ ತಾಲೂಕಿನ ಕಾರ್ಗಡಿ ಕುಂಭತ್ತಿ ಗ್ರಾಮದ ಹಸಿರು ಬೆಟ್ಟವನ್ನು ಖಾಸಗಿಯವರು ಗಣಿಗಾರಿಕೆ ನಡೆಸಿ ಧ್ವಂಸ ಮಾಡುತ್ತಿದ್ದಾರೆ. ಇದು ಪರಿಭಾವಿತ ಅರಣ್ಯ ಪ್ರದೇಶವಾಗಿದ್ದು ಶರಾವತಿ ಜಲಾಶಯಕ್ಕೆ ಹೊಂದಿಕೊಂಡಿದೆ. ಕುಂಭತ್ತಿ ಗ್ರಾಮದ ಜನರ ವಿರೋಧದ ನಡುವೆಯೂ ಗಣಿಗಾರಿಕೆ ನಡೆಯುತ್ತಿದೆ. ಇದೀಗ ಕೆಲವರು ಹೈಕೋರ್ಟ್‌ಗೆ ಹೋಗಿದ್ದಾರೆ. ಅರಣ್ಯ ಇಲಾಖೆಯು ನ್ಯಾಯಾಲಯದಲ್ಲಿ ಗಟ್ಟಿಯಾದ ವಾದ ಮಂಡಿಸಬೇಕು. ಸಾಗರ, ಹೊಸನಗರ, ಸೊರಬ ತಾಲೂಕುಗಳಲ್ಲಿ ಸುಮಾರು 3000 ಕೆರೆಗಳ ಅತಿಕ್ರಮಣವಾಗಿದ್ದು, ಅವುಗಳನ್ನು ತೆರವುಗೊಳಿಸಿ ಅಭಿವೃದ್ಧಿ ಪಡಿಸಬೇಕು ಎಂದು ಕೋರಿದರು.
ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪ್ರಮುಖರಾದ ಕೆ.ವೆಂಕಟೇಶ್, ಆನೆಗುಳಿ ಸುಬ್ರಾವ್, ಶ್ರೀಪಾದ ಬಿಚ್ಚುಗತ್ತಿ, ಜಗದೀಶ್, ಉದಯಕುಮಾರ್, ಎಂ.ಆರ್.ಪಾಟೀಲ್ ಇತರರಿದ್ದರು.