

ಗುಂಡ್ಲುಪೇಟೆ: ಗ್ರಾಮ ಪಂಚಾಯಿತಿಗಳಲ್ಲಿ ಬಿಲ್ ಕಲೆಕ್ಟರ್‌ಗಳ ಬದಲಾಗಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಂದ ಕರ ವಸೂಲಿಗೆ ರಾಜ್ಯ ಸರಕಾರ ಅವಕಾಶ ನೀಡಿದರೆ ಗ್ರಾಮ ಪಂಚಾಯಿತಿ ನೌಕರರ ರಾಜ್ಯ ಸಂಘಟನೆ ಕೈಗೊಳ್ಳುವ ನಿರ್ಧಾರಗಳಿಗೆ ಎಲ್ಲ ನೌಕರರು ಬದ್ಧರಾಗಿರಬೇಕು ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಹೇಂದ್ರ ಮನವಿ ಮಾಡಿದರು.
ಪಟ್ಟಣದ ಗ್ರಾಮ ಪಂಚಾಯಿತಿ ನೌಕರರ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ನೌಕರರ ಸಭೆಯಲ್ಲಿ ಮಾತನಾಡಿದರು.
ಮೂಲ ಸೌಕರ್ಯಗಳ ಕೊರತೆಗಳ ನಡುವೆಯೂ ನಿತ್ಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಬಿಲ್‌ಕಲೆಕ್ಟರ್‌ಗಳು ಕರ ವಸೂಲಿ ಮಾಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ನೌಕರರು ತಮ್ಮ ಬೇಡಿಕೆಗಳಿಗೆ ರಾಜ್ಯಮಟ್ಟದಲ್ಲಿ ಹೋರಾಟ ನಡೆಸುತ್ತಿದರೂ ಇನ್ನೂ ಈಡೇರಿಲ್ಲ. ಸದ್ಯ ಸರ್ಕಾರ ಸ್ವಸಹಾಯ ಸಂಘದವರಿಗೆ ಕರ ವಸೂಲಿಗೆ ಅವಕಾಶ ನೀಡುವ ಕ್ರಮದ ಪ್ರಸ್ತಾಪಿಸಿದ್ದು ಇದು ಮುಂದಿನ ದಿನಗಳಲ್ಲಿ ನೌಕರರ ಉದ್ಯೋಗ ಭದ್ರತೆಗೆ ಅಡ್ಡಿಯಾಗಲಿದೆ. ಆದ್ದರಿಂದ ಇದರ ವಿರುದ್ಧ ರಾಜ್ಯ ಸಂಘಟನೆಯವರು ಜು.23ರಂದು ಬೆಂಗಳೂರಿನಲ್ಲಿ ಹೋರಾಟ ನಡೆಸಲು ಮುಂದಾಗಿದ್ದಾರೆ. ಆದ್ದರಿಂದ ಎಲ್ಲಾ ಗ್ರಾಮ ಪಂಚಾಯಿತಿಗಳ ನೌಕರರು ಹೋರಾಟದಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಬರಗಿ ಸಿದ್ದರಾಜು, ಉಪಾಧ್ಯಕ್ಷ ಚಿಕ್ಕತುಪ್ಪೂರು ಮಲ್ಲು ತಾಲೂಕು ಉಪಾಧ್ಯಕ್ಷ ರಾಜಣ್ಣ, ಮಲ್ಲೇಶ, ಸಿದ್ದರಾಜು, ಮಂಜು, ಶಿವಮ್ಮ, ಮಂಜುಳಾ, ನೇನೆಕಟ್ಟೆ ಮಲ್ಲಿಕಾರ್ಜುನ ಮುಂತಾದವರು ಇದ್ದರು.