ಪ್ರಾಧಿಕಾರ ರಚನೆ ಹಿಂಪಡೆಯದಿದ್ದರೆ ಹೋರಾಟ

 ಚಿಕ್ಕಲ್ಲೂರು ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಭರತ್ ರಾಜೇ ಅರಸ್ ಮಾತನಾಡಿದರು.
ಚಿಕ್ಕಲ್ಲೂರು ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಭರತ್ ರಾಜೇ ಅರಸ್ ಮಾತನಾಡಿದರು.
Published on

ಕೊಳ್ಳೇಗಾಲ: ಭಕ್ತರ ಪ್ರಾತಿನಿಧ್ಯ, ಮಠದ ಪರಂಪರೆ, ಮನೆತನದ ಆಚರಣೆಗಳನ್ನು ಪರಿಗಣಸದೆ ಸರ್ಕಾರ ಏಕಾಏಕಿ ಅಧಿಕಾರಿಗಳ ಹೇಳಿಕೆಯಂತೆ ಮಂಟೇಸ್ವಾಮಿ ಸಿದ್ದಪ್ಪಾಜಿ ರಾಚಪ್ಪಾಜಿ ಮಠಗಳ ಪ್ರಾಧಿಕಾರ ರಚನೆಗೆ ಆದೇಶ ಮಾಡಿದ್ದು, ಇದನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಚಿಕ್ಕಲ್ಲೂರು ದೇವಸ್ಥಾನದ ಧರ್ಮಾಧಿಕಾರಿ ಭರತ್ ರಾಜೇ ಅರಸ್ ಹೇಳಿದರು.

ಸಿದ್ದಪ್ಪಾಜಿ ರಾಚಪ್ಪಾಜಿ ಮಠಗಳ ಪ್ರಾಧಿಕಾರ ರಚನೆಗೆ ಸರ್ಕಾರ ಆದೇಶ ಮಾಡಿರುವುದನ್ನು ವಿರೋಧಿಸಿ ತಾಲೂಕಿನ ಚಿಕ್ಕಲ್ಲೂರು ದೇವಸ್ಥಾನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಚಿಕ್ಕಲ್ಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನೀಲಗಾರರು, ಭಕ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದರು. ಚಿಕ್ಕಲ್ಲೂರು ದೇವಸ್ಥಾನದಲ್ಲಿ ಕುರಿ, ಮೇಕೆಗಳನ್ನು ಬಲಿ ಪೀಠದಲ್ಲಿ ಬಲಿ ನೀಡುತ್ತಾರೆ ಎಂದು ಸಂಘ ಸಂಸ್ಥೆಯವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಜನವರಿಯಲ್ಲಿ ನಡೆಯುವ ಜಾತ್ರೆಗೆ ಸ್ವತಂತ್ರವಾಗಿ ಭಕ್ತರು ಬಾರಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರತಿವ ರ್ಷವೂ ಭಕ್ತರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.

ದೇವಸ್ಥಾನದಲ್ಲಿ ಬಲಿಪೀಠ ಇಲ್ಲ. ಇಲ್ಲಿ ಯಾರೂ ಕುರಿಗಳನ್ನು ಬಲಿ ನೀಡುವುದಿಲ್ಲ. ದೇವಸ್ಥಾನದ ಬಹಳ ದೂರದಲ್ಲಿ ನೀಲಗಾರರು, ಭಕ್ತರು ಮತ್ತು ಹರಕೆ ಹೊತ್ತವರು ಹರಕೆ ತೀರಿಸುತ್ತಾರೆ. ಹರಕೆ ತೀರಿಸಲು ಬರುವ ಭಕ್ತರಿಗೆ ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಭಕ್ತರಿಗೆ ತೊಂದರೆ ಕೊಡುವ ಕೆಲಸಗಳು ಆಗುತ್ತಿವೆ ಎಂದು ಹೇಳಿದರು.

ತಲಾತಲಾಂತರದಿಂದ ನಡೆದು ಬಂದಿರುವ ಆಚರಣೆ, ಪರಂಪರೆ, ವಿಚಾರ, ಆಚಾರಗಳನ್ನು ರಾಜ್ಯ ಸರ್ಕಾರ ಅರಿಯದೆ ಏಕಾಏಕಾಯಾಗಿ ಪ್ರಾಧಿಕಾರ ರಚನೆ ಆದೇಶ ಮಾಡಿದ್ದು, ಇದರಿಮದ ಭಕ್ತರು ಹಾಗೂ ಮಠದವರಿಗೆ ಆಘಾತ ಉಂಟಾಗಿದೆ. ಒಂದು ವೇಳೆ ಸರ್ಕಾರ ಪ್ರಾಧಿಕಾರ ರಚನೆಗೆ ಮುಂದಾದರೆ ನಮ್ಮ ಪರಂಪರೆಗೆ ಧಕ್ಕೆಯುಂಟಾಗ್ದಲಿದೆ. ಪರಂಪರೆಯನ್ನು ಉಳಿಸಿ ಬೆಳೆಸಲು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಈ ಹೋರಾಟಕ್ಕೆ ಎಲ್ಲರೂ ಸಹಕರಿಸಬೇಕೆಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net