ಅಂತರ್ಜಲ ಯೋಜನೆ ರೂಪಿಸದಿದ್ದರೆ ಹೋರಾಟ

ಶೈಲೇಂದ್ರ
ಶೈಲೇಂದ್ರ
Published on

ಹನೂರು: ರೈತರ ಸಮಸ್ಯೆ ಬಗೆಹರಿಸದಿದ್ದಲ್ಲಿ ಅ.27ರಂದು ತಾಲೂಕಿನ ವಡಕೆಹಳ್ಳದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಎಚ್ಚರಿಸಿದರು.

ಹನೂರು ಭಾಗದಲ್ಲಿ ಹೆಚ್ಚಿನ ರೈತರು ಖುಷ್ಕಿ ಭೂಮಿ ಹೊಂದಿದ್ದು, ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಸಮರ್ಪಕ ಮಳೆಯಾಗದ ಪರಿಣಾಮ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ ದಂಟಳ್ಳಿ ಸಮೀಪವೇ ಕಾವೇರಿ ನದಿ ಇದ್ದರೂ ನೀರು ತಮಿಳುನಾಡಿಗೆ ಹರಿಯುತ್ತಿದೆ. ಇದರಿಂದ ಕ್ಷೇತ್ರದ ರೈತರು ಹಾಗೂ ಜನರಿಗೆ ನದಿ ನೀರು ಉಪಯೋಗಕ್ಕೆ ಬರುತ್ತಿಲ್ಲ. ಕಾವೇರಿ ನದಿಯಿಂದ ಕುರಟ್ಟಿ ಹೊಸೂರು, ಶೆಟ್ಟಳ್ಳಿ ಹಾಗೂ ಮಾರ್ಟಳ್ಳಿ ಭಾಗಕ್ಕೆ ನೀರಾವರಿ ಸೌಕರ್ಯ ಒದಗಿಸುವಂತೆ ಆ.5 ರಂದು ಕಾವೇರಿ ನದಿ ದಡಕ್ಕೆ ತೆರಳಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಅಧಿಕಾರಿಗಳು ಅಗತ್ಯ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ನೀರಾವರಿ ಸೌಕರ್ಯ ಒದಗಿಸುವುದರ ಜತೆಗೆ ಅಂತರ್ಜಲ ಯೋಜನೆಯನ್ನು ರೂಪಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕಿನ ದಂಟಳ್ಳಿಯಲ್ಲಿ ಸುಮಾರು 3,500 ಎಕರೆ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಬಗರ್‌ಹುಕುಂನಡಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಇನ್ನು ಮಾರ್ಟಳ್ಳಿಯಲ್ಲಿ 1,700 ಹಾಗೂ ಹೂಗ್ಯಂನಲ್ಲಿ 2,700 ಎಕರೆಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಆರ್‌ಟಿಸಿ ದೊರಕಿಲ್ಲ. ಪರಿಣಾಮ ಸರ್ಕಾರದಿಂದ ಸಿಗುವ ಸವಲತ್ತಿನಿಂದ ರೈತರು ವಂಚಿತರಾಗಿದ್ದಾರೆ. ಹಾಗೆಯೇ ದಂಟಳ್ಳಿ ಮಾರ್ಗದಲ್ಲಿ ರಸ್ತೆ ಬದಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಅರ್ಪುದರಾಜು, ಬಸವೇಗೌಡ, ಪುಟ್ಟರಾಜು, ಲಾರೆನ್ಸ್, ವಸಂತಕುಮಾರ್, ಅಂತೋಣಿಸ್ವಾಮಿ, ಜೋಸೆಫ್, ಲಾಸರ್, ಚಿಕ್ಕಮಲ್ಲಪ್ಪ, ಪುಟ್ಟಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net