

ವಿಜಯವಾಣಿ ಸುದ್ದಿಜಾಲ ಬೈಂದೂರು
ಬೈಂದೂರು ಜನತೆಯ ದಶಕಗಳ ಹೋರಾಟದಿಂದ ಇಲ್ಲಿ ಸಿವಿಲ್ ಮತ್ತು ಜೆಎಫ್ಎಂಸಿ ನ್ಯಾಯಾಲಯ ಸ್ಥಾಪನೆಯಾಗಿದೆ. ಪ್ರಸಕ್ತ ಈ ಕೋರ್ಟನ್ನು ಬೇರೆಕಡೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದ್ದು, ಇದರ ವಿರುದ್ಧ ಪ್ರಬಲ ಹೋರಾಟ ಕೈಗೊಳ್ಳಲಾಗುವುದು ಎಂದು ಬೈಂದೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಮೋಬಿ ಪಿ.ಸಿ. ಹೇಳಿದರು.
ಬೈಂದೂರು ತಾಲೂಕು ಆಡಳಿತ ಸೌಧದ ಮುಂಭಾಗ ಬಾರ್ ಅಸೋಸಿಯೇಷನ್ ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ತಾಲೂಕು ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕಿಂತಲೂ ಹೆಚ್ಚಿನ ಪ್ರಕರಣಗಳು ಕೋರ್ಟ್ನಲ್ಲಿದ್ದು, ಈ ಪ್ರಕರಣಗಳ ವಿಚಾರಣೆಗೆ ಹೆಚ್ಚುವರಿ ಸಿವಿಲ್ ಮತ್ತು ಜಿಎಂಎಫ್ಸಿ ನ್ಯಾಯಾಲಯ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯದ ಅಗತ್ಯವಿದೆ. ಬೈಂದೂರಿನಲ್ಲಿ ನ್ಯಾಯಾಲಯ ಪ್ರಾರಂಭಿಸುವ ಮೊದಲು ಹೈಕೋರ್ಟ್ ನಿರ್ದೇಶನದಂತೆ ಪಂಚಾಯಿತಿ ಕಟ್ಟಡವನ್ನು ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅನುಕೂಲವಾಗುವಂತೆ ಮಾರ್ಪಡಿಸಿ ಕೋರ್ಟ್ ತೆರೆಯಲಾಗಿದೆ ಎಂದರು.
ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಪ್ರಶಾಂತ ಪೂಜಾರಿ, ಉಪಾಧ್ಯಕ್ಷ ಚಿಕ್ಕಯ್ಯ ಶೆಟ್ಟಿ, ಖಜಾಂಚಿ ಲಿಂಗಪ್ಪ, ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು. ನಂತರ ತಹಸೀಲ್ದಾರ್ ಪ್ರದೀಪ್ ರಾಂ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ನ್ಯಾಯಾಲಯದ ಕಾರ್ಯನಿರ್ವಹಣೆಗೆ ಇಲ್ಲಿ ಯಾವುದೇ ಮೂಲಸೌಕರ್ಯಗಳ ಕೊರತೆಯಿಲ್ಲ. ಹಾಗಿದ್ದರೂ ಪ್ರಸ್ತುತ ಬೈಂದೂರು ನ್ಯಾಯಾಲಯವನ್ನು ಕುಂದಾಪುರಕ್ಕೆ ವರ್ಗಾಯಿಸಲು ಹುನ್ನಾರ ನಡೆಯುತ್ತಿದ್ದು, ಇದು ತಾಲೂಕಿನ ಜನತೆಗೆ ಮಾಡುವ ಅನ್ಯಾಯ. ನ್ಯಾಯಾಲಯ ಕುಂದಾಪುರಕ್ಕೆ ವರ್ಗಾವಣೆಯಾದರೆ ಬೈಂದೂರು ವಕೀಲರ ಸಂಘ ಸ್ಥಳೀಯರ ಸಹಕಾರದೊಂದಿಗೆ ನಿರಂತರ ಹೋರಾಟ ನಡೆಸಲಿದೆ. -ಮೋಬಿ ಪಿ.ಸಿ, ತಾಲೂಕು ಬಾರ್ ಅಸೋಸಿಯೇಷನ್ ಅಧ್ಯಕ್ಷ