

ಮಂಗಳೂರು: ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವವರನ್ನು ಕರೆತರುವ ಕಾರ್ಯ ಮುಂದುವರಿದಿದ್ದು, ಮಂಗಳೂರಿಗೆ ಕುವೈತ್, ಯುಎಇ ಮತ್ತು ಮಸ್ಕತ್‌ನಿಂದ ಮೂರು ವಿಮಾನಗಳಲ್ಲಿ ಒಟ್ಟು 422 ಮಂದಿ ಕರಾವಳಿಗರು ಆಗಮಿಸಿದ್ದಾರೆ.
ಈ ಪೈಕಿ ಎರಡು ಚಾರಿಟಿ ವಿಮಾನಗಳಾಗಿದ್ದು, ಒಂದು ವಿಮಾನವು ಮಂಗಳವಾರ ತಡರಾತ್ರಿ ಯುಎಇಯ ಶಾರ್ಜಾದಿಂದ 174 ಪ್ರಯಾಣಿಕರೊಂದಿಗೆ ಆಗಮಿಸಿದ್ದರೆ, ಇನ್ನೊಂದು ಬುಧವಾರ ಸಂಜೆ 168 ಪ್ರಯಾಣಿಕರನ್ನು ಹೊತ್ತು ಕುವೈತ್‌ನಿಂದ ಬಂದಿಳಿದಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಒಂದು ವಿಮಾನ ಮಸ್ಕತ್‌ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ 80 ಪ್ರಯಾಣಿಕರನ್ನು ಬುಧವಾರ ರಾತ್ರಿ ಕರೆತಂದಿದೆ.
ಕುವೈತ್ ಪ್ರಯಾಣಿಕರ ಖರ್ಚನ್ನು ಅಲ್ಲಿನ ಅಕ್ಬರ್ ಟ್ರಾವೆಲ್ಸ್ ಆಫ್ ಇಂಡಿಯಾ, ಯುಎಇ ವಿಮಾನದ ಖರ್ಚನ್ನು ಅಲ್ಲಿನ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ ಮತ್ತು ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಭರಿಸಿದ್ದಾರೆ. ಈ ವಿಮಾನದ ಪ್ರಯಾಣಿಕರು ಅವರ ಸಿಬ್ಬಂದಿ, ಕುಟುಂಬ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳಾಗಿದ್ದಾರೆ.
ಎಲ್ಲ ಪ್ರಯಾಣಿಕರನ್ನು ಆರೋಗ್ಯ ತಪಾಸಣೆ ನಂತರ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಹೊಟೇಲ್‌ಗಳಿಗೆ ಕಳುಹಿಸಲಾಗಿದೆ. ಐದು ದಿನಗಳ ನಂತರ ಕೋವಿಡ್-19 ಪರೀಕ್ಷೆಗಾಗಿ ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗುತ್ತದೆ.