

ಸಿದ್ದಾಪುರ: ನಿರಾಶ್ರಿತರಿಗೆ ನಿವೇಶನ ಹಾಗೂ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ನಿರಾಶ್ರಿತರ ನಿವೇಶನ ಹೋರಾಟ ಸಮಿತಿ ಹಮ್ಮಿ ಕೊಂಡಿರುವ ಅಹೋರಾತ್ರಿ ಹೋರಾಟ ಏಳು ದಿನ ಪೂರೈಸಿದ್ದು, ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿ ಬೆಂಬಲ ಸೂಚಿಸಿದೆ.
ಪ್ರತಿಭಟನಾ ಸ್ಥಳಕ್ಕೆ ಭಾನುವಾರ ಆಗಮಿಸಿದ ಸಮಿತಿ ಹೋರಾಟಗಾರರು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸ್ವಾತಂತ್ರೃ ಬಂದು 70 ದಶಕ ಕಳೆದರೂ ನಿವೇಶನಕ್ಕಾಗಿ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಬೇಸರದ ಸಂಗತಿ. ನಿರಾಶ್ರಿತರ ಸಮಸ್ಯೆ ಕೇವಲ ಸಿದ್ದಾಪುರ ಕರಡಿಗೋಡಿಗೆ ಸೀಮಿತವಾಗಿಲ್ಲ. ಅಲ್ಲದೆ ಜಿಲ್ಲಾದ್ಯಂತ ಲೈನ್ ಮನೆಯಲ್ಲಿ ಬಹುತೇಕ ಕೂಲಿ ಕಾರ್ಮಿಕರು ವಾಸವಾಗಿದ್ದು, ಎಲ್ಲರಿಗೂ ನಿವೇಶನ ಹಾಗೂ ಮನೆ ನಿರ್ಮಿಸಿ ನೀಡ ಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ ಎಂದು ದಸಂಸ ಮುಖಂಡರು ತಿಳಿಸಿದರು.
ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದರೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದು ದುರದೃಷ್ಟಕರ. ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಲಾಗುವುದು. ಒಂದು ವೇಳೆ ಸ್ಪಂದಿಸದಿದ್ದರೆ ಜಿಲ್ಲಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಸಮಿತಿ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಎಚ್ಚರಿಸಿದರು.
ಸಮಿತಿಯ ನೆಲ್ಯಹುದಿಕೇರಿ ಹೋಬಳಿ ಸಂಚಾಲಕ ರವಿ, ನಿರಾಶ್ರಿತರ ನಿವೇಶನ ಹೋರಾಟ ಸಮಿತಿ ಸಂಚಾಲಕರಾದ ಕೃಷ್ಣ, ಯಮುನಾ ಮತ್ತಿತರರಿದ್ದರು.