

ಹುಬ್ಬಳ್ಳಿ: ನಗರದ ಜನತಾ ಬಜಾರ್ ಮಾರುಕಟ್ಟೆ ಪ್ರದೇಶದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ವಿುಸಿರುವ ವಾಣಿಜ್ಯ ಸಂಕೀರ್ಣದಲ್ಲಿ 121 ವ್ಯಾಪಾರಸ್ಥರಿಗೆ ಕಟ್ಟೆಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನುಳಿದ 56 ವ್ಯಾಪಾರಸ್ಥರಿಗೆ ಒಂದು ವಾರದಲ್ಲಿ ಜಾಗ ಕಲ್ಪಿಸಿಕೊಡದಿದ್ದರೆ ಮಾರ್ಚ್ ಮೊದಲ ವಾರದಿಂದ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಜನತಾ ಬಜಾರ್ ಸೂಪರ್ ಮಾರ್ಕೆಟ್ ಚಿಕ್ಕ ವರ್ತಕರ ಸಂಘದ ಗೌರವಾಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ಬಜಾರ್ನಲ್ಲಿನ ಸ್ಮಾರ್ಟ್ಸಿಟಿ ಕಟ್ಟಡ ಉದ್ಘಾಟನೆಗೊಂಡು ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯಾಗಿದೆ. ಆದರೂ, ವ್ಯಾಪಾರಸ್ಥರಿಗೆ ಕಟ್ಟೆಗಳನ್ನು ಹಂಚಿಕೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಲವಾರು ಬಾರಿ ಪ್ರತಿಭಟನೆ ನಡೆಸಿದ ನಂತರ ಎಚ್ಚೆತ್ತ ಮಹಾನಗರ ಪಾಲಿಕೆ ಚೀಟಿ ಎತ್ತುವ ಮೂಲಕ ವ್ಯಾಪಾರಸ್ಥರಿಗೆ ಕಟ್ಟೆಗಳನ್ನು ಹಂಚಿಕೆ ಮಾಡಿದೆ. 177 ವ್ಯಾಪಾರಸ್ಥರಲ್ಲಿ 121 ಜನರಿಗಷ್ಟೇ ಕಟ್ಟೆ ದೊರಕಿವೆ. ಉಳಿದವರಿಗೆ ಒಂದು ವಾರದಲ್ಲಿ ಸ್ಥಳಾವಕಾಶ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
ವಿದ್ಯುತ್, ಶೌಚಾಲಯ, ಕುಡಿಯುವ ನೀರು ಸೇರಿ ಇನ್ನಿತರ ಸೌಲಭ್ಯಗಳನ್ನು ಒದಗಿಸುವುದಾಗಿ ಪಾಲಿಕೆ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. ಇಲ್ಲಿನ ವ್ಯಾಪಾರಸ್ಥರು ವಾರ್ಷಿಕ ತಲಾ 9 ಸಾವಿರದಿಂದ 10 ಸಾವಿರ ರೂ.ವರೆಗೆ ಕಟ್ಟಾ ಬಾಡಿಗೆ ಪಾವತಿಸಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಎಂ.ಎ. ಮುಜಾಹಿದ, ನಾರಾಯಣ ಮುದ್ದಣ್ಣವರ, ರಾಘವೇಂದ್ರ ತಾಂಬ್ರೆ, ರಮೇಶ ಪೂಜಾರ, ರಾಜು ವಾಲ್ಮೀಕಿ, ವಿರೂಪಾಕ್ಷಪ್ಪ ಹೂಗಾರ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.