

ಬಾಗಲಕೋಟೆ: ಆಸ್ತಿ ಪರಿಹಾರ ಪಾಲಿಗಾಗಿ ನಡೆದಿದ್ದ ಜಗಳದ ಹಿನ್ನೆಲೆಯಲ್ಲಿ ಬಾಮೈದುನನ್ನು ಇರಿದು ಕೊಲೆ ಮಾಡಿರುವ ಮನ ಕಲಕುವ ಘಟನೆ ಬಾಗಲಕೋಟೆ ನಗರದಿಂದ ವರದಿಯಾಗಿದೆ. 30 ಲಕ್ಷ ಪರಿಹಾರ ಹಣದ ವಿಷಯವಾಗಿ ಅಕ್ಕ ಮತ್ತು ಭಾವನೊಂದಿಗೆ ವಿರಸ ಹೊಂದಿದ್ದ ವೀರೇಶ್ ಹಡಗಲಿಮಠ(24) ಮೃತ ಯುವಕ.
ಆಲಮಟ್ಟಿ ಜಲಾಶಯ ಮುಳುಗಡೆ ಆಸ್ತಿ ಪರಿಹಾರವಾಗಿ ವೀರೇಶ್ಗೆ 30 ಲಕ್ಷ ರೂಪಾಯಿ ಲಭಿಸಿತ್ತು. ಈ ಹಣದಲ್ಲಿ ಪಾಲು ಬೇಕೆಂದು ಅಕ್ಕ ಮಧುಶ್ರೀ ಮತ್ತು ಬಾವ ಅವಧೂತ ಒತ್ತಾಯ ಮಾಡುತ್ತಿದ್ದರು. ಬಾಗಲಕೋಟೆಯ ನವನಗರದ 63ನೇ ಸೆಕ್ಟರ್ನಲ್ಲಿ ವಾಸವಾಗಿದ್ದ ವೀರೇಶ್ ಮನೆಗೆ ಶುಕ್ರವಾರ ಸಂಜೆ ಬಾವ ಅವಧೂತ ಮತ್ತು ಸಹಚರರು ನುಗ್ಗಿ ಚಾಕುವಿನಿಂದ ಇರಿದು ಗಂಭೀರವಾಗಿ ಘಾಸಿಗೊಳಿಸಿದ್ದಾರೆ. ಈ ವೇಳೆ ವೀರೇಶ್ ಜತೆ ಇದ್ದ ಸ್ನೇಹಿತ ಸುಹಾಸ್ಗೂ ಗಾಯವಾಗಿದೆ. ವೀರೇಶ್ನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ನಡೆದ ಸ್ಥಳಕ್ಕೆ ಬಾಗಲಕೋಟೆಯ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವೀರೇಶ್ ಹಡಗಲಿಮಠನಿಗೆ ತಂದೆ-ತಾಯಿ ಇರಲಿಲ್ಲ. ನವನಗರದಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ. ಅಕ್ಕ ಮಧುಶ್ರೀಗೆ ಕಳೆದ ನಾಲ್ಕು ವರ್ಷದ ಹಿಂದೆ ಮದುವೆ ಆಗಿತ್ತು ಎನ್ನಲಾಗಿದೆ.