ವೈದ್ಯಕೀಯ ಕಾಲೇಜ್‌ಗಾಗಿ ಹೋರಾಟ, ಜಿಲ್ಲಾ ಮಟ್ಟದಲ್ಲಿ ಸಮಾವೇಶದಲ್ಲಿ ಒಕ್ಕೋರಲ ನಿರ್ಧಾರ, ಪಿಪಿಪಿ ಮಾದರಿ ಒಪ್ಪಲು ಸಾಧ್ಯವೇ ಇಲ್ಲ

AIDSO MEDICAL COLLEGE SAMAVESHA
ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಐಡಿಎಸ್‌ಒ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮುಖಂಡ ಅನಿಲ ಹೊಸಮನಿ ಮಾತನಾಡಿದರು.
Published on

ವಿಜಯಪುರ: ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ನಿರ್ಮಿಸಬೇಕು. ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಜಿಲ್ಲೆಯ ಹೋರಾಟಗಾರರು, ಚಿಂತಕರು ಹಾಗೂ ಪ್ರಜ್ಞಾವಂತರು ಒಕ್ಕೋರಲಿನಿಂದ ನಿರ್ಧಾರ ಪ್ರಕಟಿಸಿದರು.

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಐಡಿಎಸ್‌ಒ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಇಂಥದ್ದೊಂದು ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲೆಗೆ ಈಗಾಗಲೇ ಮಂಜೂರಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ತ್ವರಿತವಾಗಿ ಮಂಜೂರುಗೊಳಿಸಬೇಕು. ಅದನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ನೀಡಬಾರದು. ಹಾಗೊಂದು ವೇಳೆ ಖಾಸಗಿ ಸಹಭಾಗಿತ್ವಕ್ಕೆ ನೀಡಿದ್ದೇಯಾದರೂ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಅಲ್ ಅಮೀನ್ ಮೆಡಿಕಲ್ ಕಾಲೇಜಿನ ಅಧೀಕ್ಷ ಡಾ. ಜಿಲಾನಿ ಅವಟಿ ತಿಳಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಕೆಲವು ಚಿಕಿತ್ಸೆಗೆ 30ರಿಂದ 40 ಸಾವಿರ ರೂಪಾಯಿ ಖರ್ಚಾಗಲಿದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಚಿಕಿತ್ಸೆಗಳೂ ಉಚಿತವಾಗಿ ಸಿಗಲಿವೆ. ಬಡವರಿಗೆ ಆರೋಗ್ಯದ ಸೌಲಭ್ಯ ಸಿಗಬೇಕಾದರೆ ಮತ್ತು ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಸಿಗಬೇಕಾದರೆ ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು. ಪಿಪಿಪಿ ಮಾದರಿಯನ್ನು ನಾವು ಒಪ್ಪುವುದಿಲ್ಲ, ಅದನ್ನು ಸಂಪೂರ್ಣವಾಗಿ ವಿರೋಧ ಮಾಡುವುದಾಗಿ ತಿಳಿಸಿದರು.

ರೈತ ಹೋರಾಟಗಾರ ಅರವಿಂದ ಕುಲಕರ್ಣಿ ಮಾತನಾಡಿ, ವಿಜಯಪುರ ಜಿಲ್ಲೆಯು ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಾ ಬಂದಿದ್ದು ಬಹುತೇಕ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ಕಷ್ಟ ಪಟ್ಟು ಅಭ್ಯಾಸ ಮಾಡಿ ಮುಂದೆ ಬರಬೇಕೆಂದರೆ ಉನ್ನತ ಶಿಕ್ಷಣ ಪಡೆಯಲು ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ. ಖಾಸಗಿ ಕಾಲೇಜುಗಳಲ್ಲಿ ಡೊನೇಶನ್ ಕೊಟ್ಟು ಕಲಿಯುವುದಂತೂ ನಮ್ಮ ಜಿಲ್ಲೆಯ ಬಡ ಜನಗಳಿಗೆ, ರೈತ ಮತ್ತು ಕೂಲಿಕಾರ್ಮಿಕರ ಮಕ್ಕಳಿಗೆ ಖಂಡಿತ ಸಾಧ್ಯವಿಲ್ಲ. ಆದ್ದರಿಂದ ಸರ್ಕಾರವು ವಿಶೇಷ ಮುತುವರ್ಜಿವಹಿಸಿ ವಿಜಯಪುರ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕೆಂದರು.

ಎಐಡಿಎಸ್‌ಒ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಕಂಬಳಿ ಮಂಜುನಾಥ ಮಾತನಾಡಿ, ಕಳೆದ 20 ವರ್ಷಗಳಿಂದ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ವತಿಯಿಂದ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕೆಂದು ಹೋರಾಟ ಬೆಳೆಸಿದೆ. ಒಬ್ಬ ಕಾರ್ಮಿಕನ ಮಗ ವೈದ್ಯಕೀಯ ಶಿಕ್ಷಣ ಪಡೆಯಬೇಕಾದರೆ ಕೋಟಿಗಟ್ಟಲೆ ಖರ್ಚು ಮಾಡಬೇಕಾಗುತ್ತದೆ. ಈ ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ಉಚಿತವಾಗಿ ಶಿಕ್ಷಣ, ಆರೋಗ್ಯ ಸಿಗಬೇಕು. ಹಾಗಾಗಲು ಸರ್ಕಾರಿ ವ್ಯವಸ್ಥೆ ಬಲಗೊಳ್ಳಬೇಕೆಂದರು.

ಮುಖಂಡ ಅನಿಲ ಹೊಸಮನಿ ಮಾತನಾಡಿ, ಜನರಿಂದ ಆಯ್ಕೆಯಾದ ರಾಜಕಾರಣಿಗಳು ಜನರ ಕಲ್ಯಾಣಕ್ಕಾಗಿ ಶ್ರಮಿಸಬೇಕೇ ವಿನಃ ಖಾಸಗಿ ವ್ಯವಸ್ಥೆಗಾಗಿ ಅಲ್ಲ. ಹೀಗಾಗಿ ಸರ್ಕಾರಿ ಕಾಲೇಜು ಸ್ಥಾಪಿಸುವ ಮೂಲಕ ತಮ್ಮ ಬದ್ಧತೆ ಮೆರೆಯಬೇಕೆಂದು ಖಡಕ್ ಸಂದೇಶ ರವಾನಿಸಿದರು.

ಕಾವೇರಿ ರಜಪೂತ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಭರತಕುಮಾರ ಎಚ್.ಟಿ, ನಿವೇದಿತಾ ಚಲವಾದಿ, ಪವಿತ್ರಾ ಎ, ರಶ್ಮಿ ಮಾದನಶೆಟ್ಟಿ, ಭುವನೇಶ್ವರಿ ಐ ಹಾಗೂ ವಿವಿಧ ಕಾಲೇಜಿನ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net