ಕದಂಬ ಕನ್ನಡ ಜಿಲ್ಲೆಗಾಗಿ ಹೋರಾಟ

Kadamba
Published on

ಶಿರಸಿ: ಘಟ್ಟದ ಮೇಲಿನ ಏಳು ತಾಲೂಕುಗಳನ್ನು ಒಳಗೊಂಡು ಪ್ರತ್ಯೇಕ ಜಿಲ್ಲೆ ರಚನೆ ಆಗಲೇಬೇಕು. ನೂತನವಾಗಿ ಕದಂಬ ಕನ್ನಡ ಜಿಲ್ಲೆಗೆ ಬನವಾಸಿ ಭಾಗದ ಸಂಪೂರ್ಣ ಬೆಂಬಲವಿದೆ. ಕದಂಬ ಕನ್ನಡ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗಾಗಿ ಹೋರಾಟಗಳು ನಡೆಯಬೇಕು. ಈ ಹಿನ್ನೆಲೆಯಲ್ಲಿ ಡಿ. 6ರಂದು ಬನವಾಸಿಯ ಶ್ರೀಮಧುಕೇಶ್ವರ ದೇವಾಲಯದಿಂದ ಬೃಹತ್ ಮೆರವಣಿಗೆ ಹೊರಟು, ಉಪತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.

ಬುಧವಾರ ಬನವಾಸಿಯಲ್ಲಿ ಏರ್ಪಡಿಸಿದ್ದ ಕದಂಬ ಕನ್ನಡ ಜಿಲ್ಲೆಗಾಗಿ ಜನಜಾಗೃತಿ ಸಭೆಯಲ್ಲಿ ಸ್ಥಳೀಯ ಪ್ರಮುಖರು, ಮುಖಂಡರು ಭಾಗವಹಿಸಿ ಸಲಹೆ-ಸೂಚನೆ ನೀಡಿದರು.

ಸಂಘಟನೆಯ ಎಂ.ಎಂ. ಭಟ್ಟ ಮಾತನಾಡಿ, ಕದಂಬ ಕನ್ನಡ ಜಿಲ್ಲೆ ಪ್ರತ್ಯೇಕ ಜಿಲ್ಲೆಗಾಗಿ ಕಳೆದ 8-10 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಕೆಲ ಕಾರಣಾಂತರದಿಂದ ಹೋರಾಟ ಕಳೆಗುಂದಿತ್ತು. ಇದೀಗ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ಮತ್ತೆ ಹೋರಾಟಕ್ಕೆ ಬಲ ನೀಡಿ, ಆರಂಭಿಸಲಾಗಿದೆ. ಜಿಲ್ಲಾ ಕೇಂದ್ರ ಬಹುದೂರದಲ್ಲಿರುವುದು ತಿಳಿದಿದೆ. ನಾವು ಅನುಭವಿಸುತ್ತಿರುವ ಸಮಸ್ಯೆಗಳ ಅರಿವು ಎಲ್ಲರಿಗೂ ಇದೆ. ಇದೀಗ ಕದಂಬರ ಹೆಸರನ್ನು ಸ್ಮರಿಸುವ ಕದಂಬ ಕನ್ನಡ ಜಿಲ್ಲೆ ರಚನೆಗಾಗಿ ಎಲ್ಲರೂ ಜತೆಯಾಗಿ ಹೋರಾಡೋಣ ಎಂದರು.

ಧುರೀಣರಾದ ಜಯಶೀಲ ಗೌಡರ್ ಮಾತನಾಡಿ, ಬೇರೆ ಬೇರೆ ರಾಜ್ಯದಿಂದ, ವಿದೇಶಗಳಿಂದ ಪ್ರವಾಸಿಗರು ಬನವಾಸಿಗೆ ಬರುತ್ತಾರೆ. ಆದರೆ, ಬನವಾಸಿ ಮಾತ್ರ ಅಭಿವೃದ್ಧಿಯತ್ತ ಸಾಗುತ್ತಿಲ್ಲ. ಕದಂಬ ಕನ್ನಡ ಜಿಲ್ಲೆ ಸ್ಥಾಪನೆ ಮೂಲಕ ಬನವಾಸಿಯ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಮಾತನಾಡಿ, ಕದಂಬ ಕನ್ನಡ ಜಿಲ್ಲೆ ಹೆಸರಿನ ಮೂಲಕ ಬನವಾಸಿಯ ಹೆಸರನ್ನು ಚಿರಸ್ಥಾಯಿಯನ್ನಾಗಿಸುವ ಮೊದಲ ಪ್ರಯತ್ನಕ್ಕೆ ಖುಷಿಯಿದೆ. ಜಿಲ್ಲಾ ಕೇಂದ್ರ ಕಾರವಾರ ಬನವಾಸಿಯಿಂದ 150 ಕಿ.ಮೀ ದೂರದಲ್ಲಿದೆ. ನಮ್ಮ ಜನರ ಸಮಸ್ಯೆಗಳಿಗೆ ಕಾರವಾರದ ಜಿಲ್ಲಾ ಕೇಂದ್ರದಿಂದ ಪರಿಹಾರ ದೊರೆಯುವುದು ವಿಳಂಬವಾಗುತ್ತಿದೆ. ಈ ಎಲ್ಲ ಕಾರಣಕ್ಕೆ ನಾವೆಲ್ಲ ಒಕ್ಕೊರಲಾಗಿ ಕದಂಬ ಕನ್ನಡ ಜಿಲ್ಲೆಗಾಗಿ ಧ್ವನಿಗೂಡಿಸಬೇಕಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ರಮೇಶ ನಾಯ್ಕ, ಗಣೇಶ ಸಣ್ಣಲಿಂಗಣ್ಣನವರ್, ಹಾಲಪ್ಪನವರ ಜಕ್ಕಣ್ಣನವರ್, ವಿರೂಪಾಕ್ಷ ನಾಯಕ್ ಭಾಶಿ ಇತರರು ಅಭಿಪ್ರಾಯ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net