ಲಕ್ಷ್ಮೇಶ್ವರದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ

05 LXR CLASH
Published on

ಲಕ್ಷ್ಮೇಶ್ವರ: ಹಣಕಾಸಿನ ವ್ಯವಹಾರ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆ ಯಲ್ಲಿ ಶುಕ್ರವಾರ ರಾತ್ರಿ ಪಟ್ಟಣದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದಿದೆ.

ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಬೀಲ್ ಬಂಕಾಪುರ ಎಂಬಾತನಿಗೆ ಮೈನುದ್ದಿನ್ ತಹಶೀಲ್ದಾರ್ 10 ಸಾವಿರ ರೂ. ಕೊಟ್ಟಿದ್ದನಂತೆ. ಹಣ ವಾಪಸ್ ಕೇಳುವ ನೆಪದಲ್ಲಿ ಮೈನುದ್ದೀನ್ ಹಾಗೂ ಸಬೀಲ ಮಧ್ಯೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಇಬ್ಬರೂ ಸಾರ್ವಜನಿಕವಾಗಿಯೇ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸಬೀಲನ ಪರವಾಗಿ ಆಡೂರ ಕುಟುಂಬದ ಸದಸ್ಯನೊಬ್ಬ ಪೊಲೀಸ್ ಠಾಣೆಗೆ ದೂರು ನೀಡಿ, ಸಬೀಲನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ.

ಸರ್ಕಾರಿ ಆಸ್ಪತ್ರೆಯಲ್ಲಿಯೇ ಜಮಾಯಿಸಿದ ಆಡೂರ ಮತ್ತು ತಹಶೀಲ್ದಾರ ಕುಟುಂಬದ 8-10 ಜನರ ಗುಂಪು ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದಾಡಿದ್ದಾರೆ. ಸಿಪಿಐ ವಿಕಾಸ ಲಮಾಣಿ ಎರಡೂ ಕಡೆಯವರಿಗೆ ಲಾಠಿ ರುಚಿ ತೋರಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಗಾಯಗೊಂಡ ಸಬೀಲ ಬಂಕಾಪುರ, ನೌಶಾದ್ ಮೈನುದ್ದೀನ್ ಆಡೂರ, ಸತ್ತಾರ ಅಲಿಯಾಸ್ ಅಬ್ದುಲ್ ಸತ್ತಾರ ಆಡೂರ, ಸುಲೇಮಾನ್ ಆಡೂರ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ವಿರೋಧಿ ಬಣದ ಮೈನುದ್ದಿನ್ ತಹಶೀಲ್ದಾರ, ಇರ್ಫಾನ್ ತಹಶೀಲ್ದಾರ, ಶಾಬುದ್ದಿನ ತಹಶೀಲ್ದಾರನನ್ನು ಜಿಮ್ಸ್‌ನಲ್ಲಿ ದಾಖಲಿಸಲಾಗಿದೆ. ಈ ಕುರಿತು ಪಿಎಸ್‌ಐ ಯೂಸುಫ್ ಜಮೂಲಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶುಕ್ರವಾರ ಸಂತೆ ದಿನದ ಸಂಜೆಯೇ ಬಸ್ ನಿಲ್ದಾಣ ಮತ್ತು ರಾತ್ರಿ 9.30ಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಸಿನಿಮೀಯ ರೀತಿಯಲ್ಲಿ ಹೊಡೆದಾಡಿದ ಮತ್ತು ಆಸ್ಪತ್ರೆಯಲ್ಲಿ ನರಳಾಡುತ್ತಿರುವ ದೃಶ್ಯಗಳು, ಮೊಬೈಲ್, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ತಹಶೀಲ್ದಾರ ಹಾಗೂ ಆಡೂರ ಕುಟುಂಬಗಳ ನಡುವೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆಗಾಗ ಜಗಳ ನಡೆಯುತ್ತಲೇ ಇವೆ. ಎರಡೂ ಕುಟುಂಬದಲ್ಲಿ ರೌಡಿ ಶೀಟರ್‌ಗಳಿದ್ದು ಆಡೂರ ಕುಟುಂಬದ ಒಬ್ಬರು ಗಡಿಪಾರು ಶಿಕ್ಷೆ ಅನುಭವಿಸಿ ವಾಪಸ್ ಬಂದಿದ್ದಾನೆ. ಸಾರ್ವಜನಿಕವಾಗಿ ಪರಸ್ಪರ ಹೊಡೆದಾಡಿಕೊಂಡಿರುವ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ. ಸ್ಥಳ ಪರಿಶೀಲನೆ ನಡೆಸಿದ್ದು ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.-ಬಿ.ಎಸ್ ನೇಮಗೌಡರ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net