

ರಾಯಚೂರು: ವಿದ್ಯಾರ್ಥಿಗಳ ನಡುವೆ ಜಗಳ ವಿಕೋಪಕ್ಕೆ ತಿರುಗಿ ಹೊಡೆದಾಟಕ್ಕೆ ತಿರುಗಿದ್ದು, ಹೊಸ ವರ್ಷಾಚರಣೆ ಸಂದರ್ಭದಲ್ಲಿಯೇ ಚಾಕು ಹಿಡಿದು ಶಾಲೆಯ ಮುಂದೆಯೇ ವಿದ್ಯಾರ್ಥಿಗಳು ಹೊಡೆದಾಟ ನಡೆಸಿದ ಘಟನೆ ಜರುಗಿದೆ.
ನಗರದ ಮದರ್ ಟ್ರಸ್ಟ್‌ನ ಸೇಠ್ ರಿಕಬಚಂದ್ ಸುಖಾಣಿ ಪ್ರೌಢಶಾಲೆ ಮುಂಭಾಗದಲ್ಲಿ ಘಟನೆ ಜರುಗಿದ್ದು, ಒಬ್ಬ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿವೆ. 7ನೇ ತರಗತಿ ವಿದ್ಯಾರ್ಥಿಗೆ ಕೆಲವು ದಿನಗಳ ಹಿಂದೆ 9ನೇ ತರಗತಿ ವಿದ್ಯಾರ್ಥಿ ಹೊಡೆದಿದ್ದು, ಇಂದು 7ನೇ ತರಗತಿ ವಿದ್ಯಾರ್ಥಿ ಇಂದು ತನ್ನ ಗೆಳೆಯರೊಂದಿಗೆ ಆಗಮಿಸಿ ಹಲ್ಲೆ ನಡೆಸಿದ್ದಾನೆ.
ಏರ್‌ಗನ್ ಮತ್ತು ಚಾಕುವಿನೊಂದಿಗೆ ಆಗಮಿಸಿ 7ನೇ ತರಗತಿ ವಿದ್ಯಾರ್ಥಿ 9ನೇ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ಶಾಲೆಗೆ ಆಗಮಿಸುತ್ತಿದ್ದ ಇತರ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ.
ನಂತರ ಪಶ್ಚಿಮ ಪೊಲೀಸ್ ಠಾಣೆ ಪೊಲೀಸರು 7ನೇ ತರಗತಿ ವಿದ್ಯಾರ್ಥಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದು, ಘಟನೆಯಿಂದಾಗಿ ಶಾಲೆಯ ವಿದ್ಯಾರ್ಥಿಗಳಲ್ಲಿ ಆತಂಕದ ವಾತಾವರಣ ಉಂಟಾಗಿದೆ.