

ಉಡುಪಿ: ಬೋಟ್‌ನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಸಂಬಂಧಿಸಿ ಮೂವರು ಮೀನುಗಾರರ ನಡುವೆ ಜಗಳ ನಡೆದಿದ್ದು, ಓರ್ವನಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಮಂಜುನಾಥ (28) ಎಂಬುವವರು ಗಾಯಗೊಂಡಿದ್ದಾರೆ. ನ.18ರಂದು ರಾತ್ರಿ 10:30ಕ್ಕೆ ಬೋಟ್ ಒಂದರಲ್ಲಿ ಕೆಲಸಗಾರರಾದ ಅನಿಲ್, ಕೀರ್ತಿ ಹಾಗೂ ಮಂಜುನಾಥ್ ನಡುವೆ ಜಗಳ ನಡೆದಿದೆ. ಕೀರ್ತಿ ಎಂಬಾತ ಬಿಯರ್ ಬಾಟಲಿಯಿಂದ ಅನಿಲ್‌ನ ತಲೆಗೆ ಹೊಡೆದಿದ್ದು, ನಂತರ ಅನಿಲ್ ಬೋಟ್‌ನಲ್ಲಿದ್ದ ಚಾಕು ತಂದಾಗ ಅಷ್ಟರಲ್ಲಿ ಕೀರ್ತಿ ಓಡಿ ಹೋಗಿದ್ದನು. ಆದರೆ, ಅಲ್ಲಿಯೇ ಇದ್ದ ಮಂಜುನಾಥ್‌ನನ್ನು ಕೊಲ್ಲುವ ಉದ್ದೇಶದಿಂದ ಆತನ ಕುತ್ತಿಗೆಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಕುರಿತಂತೆ ಮಲ್ಪೆ ಠಾಣೆಯಲ್ಲಿ ಗಾಯಾಳು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.