ಮೈಸೂರು ಅರಮನೆಯಲ್ಲಿ ಕಂಜನ್ ಆನೆಯನ್ನು ಅಟ್ಟಾಡಿಸಿದ ಧನಂಜಯ ಆನೆ

Fight between elephants Kanjan and Dhananjaya in Mysore Palace
Published on

ಮೈಸೂರು: ನಾಡಹಬ್ಬ ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ಆನೆಯೊಂದು ಶುಕ್ರವಾರ ರಾತ್ರಿ ಮತ್ತೊಂದು ಆನೆಯ ಮೇಲೆ ದಾಳಿ ನಡೆಸಿ ಆ ಆನೆಯನ್ನು ಅರಮನೆ ಮುಂಭಾಗದ ರಸ್ತೆವರೆಗೂ ಅಟ್ಟಾಡಿಸಿಕೊಂಡು ಹೋಗಿದ್ದು, ಕೆಲ ಸಮಯ ಅರಮನೆ ಆವರಣದಲ್ಲಿ ಆತಂಕ ಸೃಷ್ಟಿ ಮಾಡಿತು.

ಅರಮನೆ ಆವರಣದಲ್ಲಿ ಶುಕ್ರವಾರ ರಾತ್ರಿ 7.30ರ ವೇಳೆಯಲ್ಲಿ ಆನೆಗಳಿಗೆ ಆಹಾರ ನೀಡುತ್ತಿದ್ದ ಸಂದರ್ಭ ಧನಂಜಯ ಆನೆಯು ಕಂಜನ್ ಆನೆಯ ಮೇಲೆ ನಡೆಸಿತು. ಧನಂಜಯ ಆನೆಗೆ ಆಹಾರ ನೀಡುತ್ತಿದ್ದ ಸಂದರ್ಭದಲ್ಲಿ ಕಂಜನ್ ಆನೆಯು ಸಮೀಪದಲ್ಲಿಯೇ ಹಾದು ಹೋಯಿತು. ಇದರಿಂದ ಕೋಪಗೊಂಡ ಧನಂಜಯ ಆನೆಯು ಕಂಜನ್‌ಗೆ ಬಲವಾಗಿ ದಂತದಿಂದ ತಿವಿಯಿತು. ಇದರಿಂದ ಗಾಬರಿಗೊಂಡ ಕಂಜನ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿತು. ಇದರಿಂದ ಆತಂಕಗೊಂಡ ಕಂಜನ್ ಆನೆಯ ಮೇಲಿದ್ದ ಕಾವಡಿ ಕೆಳಕ್ಕೆ ಜಿಗಿದರು.

ಕಂಜನ್ ಆನೆಯು ಆನೆಯು ಆತಂಕಗೊಂಡು ಅರಮನೆ ಆವರಣದಿಂದ ಅರಮನೆ ಮುಂಭಾಗದ ಜಯಮಾರ್ತಾಂಡ ಮುಖ್ಯಧ್ವಾರವನ್ನು ದಾಟಿ ಮುಖ್ಯ ರಸ್ತೆಗೆ ಆಗಮಿಸಿತು. ಆನೆ ಓಡುವ ರಭಸಕ್ಕೆ ಜಯಮಾರ್ತಾಂಡ ಮುಖ್ಯ ಧ್ವಾರದ ಬಳಿ ಅಳವಡಿಸಿದ್ದ ಬ್ಯಾರಿಕೇಡ್ ಹಾಗೂ ಸಣ್ಣದೊಂದು ತಳ್ಳುಗಾಡಿಗೆ ಹಾನಿಯಾಯಿತು.

ಕಂಜನ್ ಆನೆಯು ಮುಖ್ಯ ರಸ್ತೆಯನ್ನು ಪ್ರವೇಶಿಸಿದ ಸಂದರ್ಭ ಧನಂಜಯ ಆನೆಯ ಮಾವುತ ಭಾಸ್ಕರ ಆನೆಯನ್ನು ನಿಯಂತ್ರಿಸಿ ಮತ್ತೆ ಅರಮನೆ ಆವರಣಕ್ಕೆ ಕರೆ ತರುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ರಸ್ತೆಯಲ್ಲಿ ಓಡುತ್ತಿದ್ದ ಕಂಜನ್ ಆನೆಯ ಹಿಂದೆ ಓಡಿದ ಕಾವಾಡಿ ನಿಲ್ಲುವಂತೆ ಸೂಚನೆ ನೀಡಿದಾಗ ಕಾವಾಡಿಯ ಧ್ವನಿ ಕೇಳಿ ಆನೆ ಹಿಂತಿರುಗಿತು. ದಿಢೀರಾಗಿ ಆನೆಗಳ ವರ್ತನೆಯಲ್ಲಿ ಆದ ಬದಲಾವಣೆಯಿಂದ ಸ್ಥಳದಲ್ಲಿ ನೆರೆದಿದ್ದ ಜನರು ಆತಂಕಗೊಂಡರು.

ಧನಂಜಯ ಹಾಗೂ ಕಂಜನ್ ಆನೆಯು ಶನಿವಾರ ಬೆಳಗ್ಗೆ ಎಂದಿನಂತೆ ಅರಮನೆ ಆವರಣದಿಂದ ಆಯುರ್ವೇದ ವೃತ್ತದವರೆಗೆ ತಾಲೀಮು ನಡೆಸಿದ್ದು, ಅವುಗಳ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ ಪ್ರತಿಯೊಬ್ಬರು ನಿಟ್ಟುಸಿರು ಬಿಡುವಂತಾಗಿದೆ.

ಆಹಾರ ಸೇವಿಸುವ ಸಂದರ್ಭ ಎರಡು ಗಂಡಾನೆಗಳ ನಡುವೆ ಘರ್ಷಣೆ ನಡೆದಿರುವ ವಿಚಾರ ನನಗೆ ಬೆಳಗ್ಗೆ ತಿಳಿಯಿತು. ಈ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಹಳ್ಳಿಗಳಲ್ಲಿ ಎರಡು ಹೋರಿಗಳನ್ನು ಅಕ್ಕ ಪಕ್ಕ ಕಟ್ಟಿ ಆಹಾರ ನೀಡಿದರೆ ಕೊಂಬಿನಲ್ಲಿ ತಿವಿಯುವುದು ಸಹಜ. ಅದೇ ರೀತಿ ಇಲ್ಲೂ ಆಗಿದೆ. ಅದೊಂದು ಸ್ನೇಹ ಪೂರ್ವಕವಾದ ಸಂಘರ್ಷವಾಗಿದೆ. ಆದರೆ, ಪ್ರಾಣಿಗಳ ವರ್ತನೆ ಕೆಲವೊಂದು ಬಾರಿ ಬದಲಾಗುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಇರುವುದು ಅವಶ್ಯಕ. ಈ ವಿಚಾರದಲ್ಲಿ ಜನರು ಹೆಚ್ಚು ಗಾಬರಿ ಪಡುವಂತಹದ್ದು ಏನು ಇಲ್ಲ. ಮಾವುತ ಆನೆಯನ್ನು ನಿಯಂತ್ರಿಸಿದ್ದು, ಯಾವುದೇ ರೀತಿಯ ಅನಾಹುತವಾಗಿಲ್ಲ. ಮಾವುತ ಭಾಸ್ಕರ ಅವರ ಧೈರ್ಯ ಮೆಚ್ಚುವಂತಹದ್ದು, ಅವರು ಆನೆಯನ್ನು ತಕ್ಷಣ ನಿಯಂತ್ರಿಸಿದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸಲಿಲ್ಲ.
ಡಾ.ಎಚ್.ಸಿ. ಮಹದೇವಪ್ಪ,
ಜಿಲ್ಲಾ ಉಸ್ತುವಾರಿ ಸಚಿವ

ಆನೆಗಳಿಗೆ ಆಹಾರ ನೀಡುವ ಸಂದರ್ಭ ಎರಡು ಗಂಡಾನೆಗಳು ಅಕ್ಕಪಕ್ಕದಲ್ಲಿ ಇದ್ದರೆ ಘರ್ಷಣೆ ನಡೆಯುವುದು ಸಹಜ. ಈ ಘರ್ಷಣೆ ಯನ್ನು ಯಾವುದೇ ವ್ಯಕ್ತಿಯ ನಿರ್ಲಕ್ಷೃ ಎಂದು ಪರಿಣಿಗಣಿಸಲು ಸಾಧ್ಯವಿಲ್ಲ. ಇದು ಆನೆಗಳ ಸಹಜ ಪ್ರತಿಕ್ರಿಯೆಯಾಗಿದೆ. ಧನಂಜಯ ಆನೆಯ ತಿವಿತದಿಂದ ಕಂಜನ್ ಆನೆಗೆ ಯಾವುದೇ ರೀತಿಯ ಗಾಯ ಆಗಲಿಲ್ಲ. ಇನ್ನು ಮುಂದೆ ಆಹಾರ ನೀಡುವ ಸಂದರ್ಭ ಪ್ರತ್ಯೇಕವಾಗಿ ನೀಡುವ ವ್ಯವಸ್ಥೆ ನೀಡಲಾಗುವುದು. ಘರ್ಷಣೆಯಲ್ಲಿ ಭಾಗವಹಿಸಿದ ಎರಡು ಆನೆಗಳಿಗೂ ಮದ ಇರಲಿಲ್ಲ.
ಟಿ. ಹೀರಾಲಾಲ್
, ಸಿಸಿಎಫ್

ಧನಂಜಯ ಹಾಗೂ ಕಂಜನ್ ಆನೆಯ ಕಿತ್ತಾಟದ ವಿಚಾರದಲ್ಲಿ ಆತಂಕ ಪಡುವಂತಹದ್ದು ಏನು ಇಲ್ಲ. ಇವು ಪಳಗಿಸಿದ ಆನೆಯಾಗಿರುವ ಹಿನ್ನೆಲೆಯಲ್ಲಿ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಶಿಬಿರಗಳಲ್ಲೂ ಇಂತಹ ಘರ್ಷಣೆಗಳು ನಡೆಯುತ್ತಿರುತ್ತದೆ. ಅದರೆ, ಮೈಸೂರು ಅರಮನೆ ಆವರಣದಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಈ ವಿಚಾರ ಸ್ವಲ್ಪ ಹೈಲೇಟ್ ಆಗಿದೆ ಅಷ್ಟೆ. ಆನೆಗಳ ವರ್ತನೆಯಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ, ಈ ರೀತಿಯ ಘರ್ಷಣೆಗಳು ಸಹಜ. ಆನೆಗಳಿಗೆ ಮದ ಬಂದಿದೆಯೇ ಎಂಬುದನ್ನೂ ಸಹ ಪರಿಶೀಲಿಸಲಾಗಿದ್ದು, ಧನಂಜಯ ಹಾಗೂ ಕಂಜನ್ ಆನೆಗೆ ಮದ ಇಲ್ಲ. ಅರಮನೆಯಲ್ಲಿ ಪೌಷ್ಟಿಕಾಂಶದಿಂದ ಕೂಡಿದ ಆಹಾರ ಸೇವಿಸು ಸಂದರ್ಭ ಇಂತಹ ತುಂಟಾಗಳು ಇರುತ್ತವೆ. ಆನೆಗಳ ವರ್ತನೆಯಲ್ಲಿ ಯಾವುದಾದರು ಬದಲಾವಣೆ ಆಗುತ್ತಿದೆಯೇ ಎಂಬುದನ್ನು ಪ್ರತಿನಿತ್ಯ ಪರಿಶೀಲಿಸಲಾಗುತ್ತದೆ. ಆನೆಗಳ ಜತೆಗೆ ಮಾವುತರು ಹಾಗೂ ಕಾವಾಡಿಗಳು ಕಡ್ಡಾಯವಾಗಿ ಇರಬೇಕು ಎಂದು ನಿರ್ದೇಶನ ನೀಡಲಾಗಿದೆ.
ಡಾ.ಐ.ಬಿ. ಪ್ರಭುಗೌಡ, ಡಿಸಿಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net