

ಗುಂಡ್ಲುಪೇಟೆ: ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಬೇಗೂರು ಸಂತೆಯಲ್ಲಿ ಅನಧಿಕೃತ ಸುಂಕ ವಸೂಲಿ ಮಾಡಿ ರೈತರನ್ನು ಶೋಷಣೆಗೆ ಒಳಪಡಿಸುತ್ತಿರುವ ವಿರುದ್ಧ ಸಂಘಟನೆಯ ವತಿಯಿಂದ ಹೋರಾಟ ಆರಂಭಿಸಲಾಗುವುದು ಎಂದು ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದರು.
ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮಘಟಕ ಉದ್ಘಾಟನೆ ಮಾಡಿ ಮಾತನಾಡಿದರು.
ತಾಲೂಕಿನ ಬೇಗೂರು ಸಂತೆಯಲ್ಲಿ ರೈತರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಬೇಗೂರು ಪಂಚಾಯಿತಿ ನಿಯಮಗಳನ್ನು ಮೀರಿ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ರೈತರ ಜಮೀನುಗಳಿಗೆ ದಾರಿ ವಿಷಯದಲ್ಲಿ ತಹಸೀಲ್ದಾರರು ರೈತ ವಿರೋಧಿತನ ಪ್ರದರ್ಶಿಸುತ್ತಿದ್ದಾರೆ. ಒಂದು ಕಡೆ ಕ್ರಷರ್‌ಗಳ ಹಾವಳಿ ಹೆಚ್ಚಾಗಿದೆ. ಅಧಿಕಾರದಲ್ಲಿ ಇರುವವರು ತಮ್ಮ ಕ್ರಷರ್‌ಗೆ ದಾರಿ ಇಲ್ಲದಿದ್ದರೂ ದಲಿತರ ಜಮೀನುಗಳ ಮೇಲೆ ದಾರಿ ಮಾಡಿಕೊಳ್ಳುತ್ತಿದ್ದಾರೆ. ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ನ.7ರಂದು ಎಲ್ಲ ತಾಲೂಕು ಕೇಂದ್ರಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು. ಜತೆಗೆ ಜಿಲ್ಲೆಗೆ ದಿವಂಗತ ಮಹಾದೇವ ಪ್ರಸಾದ್ ಅವರ ಕೊಡುಗೆಯನ್ನು ಸ್ಮರಿಸಿದರು.
ಮಂಡಳಿ ಸದಸ್ಯ ಬಂದಿಗೌಡನಹಳ್ಳಿ ನಟರಾಜ ಮಾತನಾಡಿದರು. ಪ್ರಮುಖರಾದ ಪಾಪಣ್ಣ, ನಾಗಪ್ಪ, ಹಸುಗೂಲಿ ಮಹೇಶ್, ಲೋಕೇಶ್, ಷಣ್ಮುಖ ಸ್ವಾಮಿ, ಹಾಲಳ್ಳಿ ಗ್ರಾಮ ಘಟಕದ ಅಧ್ಯಕ್ಷ ಮಹಾದೇವಸ್ವಾಮಿ, ಅರಸು ಶೆಟ್ಟಿ, ಬೋಗೇಶ್, ಉಮೇಶ್ ಇತರರು ಇದ್ದರು.