

ಮೈಸೂರು: ಕರ್ನಾಟಕ ರಾಜ್ಯ ಸರ್ಕಾರಿ ವಿಶ್ರಾಂತ ಉದ್ಯೋಗಿಗಳ ಸಂಘ, ನಿವೃತ್ತ ನೌಕರರ ಸಂಘದಿಂದ ನಗರದಲ್ಲಿ ಮಂಗಳವಾರ ಪಿಂಚಣಿದಾರರ ದಿನ (ಪೆನ್ಷನರ್ಸ್ ಡೇ) ಆಚರಿಸಲಾಯಿತು.
ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಆದಾಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಎಸ್.ವೆಂಕಟೇಶನ್ ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರ ಸಮಸ್ಯೆಗಳಿದ್ದು, ಅವುಗಳನ್ನು ಸಂಘಟನಾತ್ಮಕವಾಗಿ ಕೂಡಿ ಸರ್ಕಾರದ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಉದ್ಯೋಗದಲ್ಲಿ ಇದ್ದಾಗಲೇ ಒಂದಷ್ಟು ಕೂಡಿಟ್ಟು ನಿವೃತ್ತಿ ಜೀವನ ನಡೆಸುವ ಮೂಲಕ ತೊಂದರೆಗಳಿಂದ ಪಾರಾಗಬೇಕು ಎಂದು ಹೇಳಿದರು. ಪಿಂಚಣಿದಾರರಿಗೆ ಬರುವ ಆದಾಯ ತೆರಿಗೆ ಕುರಿತು ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಾದೇಶಿಕ ಆಯುಕ್ತರ ಕಚೇರಿ ಆಯ-ವ್ಯಯ (ಖಜಾನೆ) ಅಧಿಕಾರಿ ಕೆ.ಎಸ್.ವೆಂಕಟೇಶ್ ಮಾತನಾಡಿ, ನಿವೃತ್ತರಿಗೆ ಇರುವ ಸರ್ಕಾರದ ಸೌಲಭ್ಯಗಳು, ಹಣಕಾಸು ನಿರ್ವಹಣೆ ಸೇರಿದಂತೆ ಇನ್ನಿತರ ಮಾಹಿತಿ ನೀಡಿದರು. ಆಯುರ್ವೇದ ವೈದ್ಯ ಡಾ.ಆದಿತ್ಯ ಕಶ್ಯಪ್ ಮಾತನಾಡಿ, ಇಳಿ ವಯಸ್ಸಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ವಿಧಾನ, ಔಷಧರಹಿತ ಜೀವನ ಕ್ರಮ, ಆಹಾರ ಕ್ರಮ, ಮನೆ ಮದ್ದು ಸೇರಿದಂತೆ ಇನ್ನಿತರ ವಿಷಯ ಹಂಚಿಕೊಂಡರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಉಮಾಕಾಂತ್ ಮಾತನಾಡಿ, ಸಂಘದಿಂದ ನಿವೃತ್ತ ನೌಕರರಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮ, ಪಿಂಚಣಿದಾರರ ಹಕ್ಕುಗಳು, ಮುಂದಿನ ಕಾರ್ಯ ಚಟುವಟಿಕೆ, ಸರ್ಕಾರದಿಂದ ಬೇಕಾದ ಸವಲತ್ತು ಕುರಿತು ವಿವರಿಸಿದರು.
ಸಂಘದ ಉಪಾಧ್ಯಕ್ಷ ಕೆ.ಟಿ.ವೀರಪ್ಪ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಸಂಘದ ಗೌರವಾಧ್ಯಕ್ಷ ಎನ್.ಓಬಯ್ಯ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಉಮಾಕಾಂತ್, ಪ್ರಧಾನ ಕಾರ್ಯದರ್ಶಿ ಸಿ.ಚಿಕ್ಕಲಿಂಗಸ್ವಾಮಿ, ಖಜಾಂಚಿ ಶಿವಾನಂದ, ಉಪಾಧ್ಯಕ್ಷರಾದ ಮರಿಯಾದಾಸ್, ಕೆ.ಎಂ. ನಾಗರಾಜು, ಕೆ.ಎಂ. ಪುಟ್ಟು ಇತರರು ಇದ್ದರು.
ಇದೇ ಸಂದರ್ಭದಲ್ಲಿ ಎಎಸ್‌ಜಿ ಕಣ್ಣಿನ ಆಸ್ಪತ್ರೆಯಿಂದ 250ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಉಚಿತ ತಪಾಸಣೆ ಹಾಗೂ 70 ವರ್ಷ ಪೂರ್ಣಗೊಂಡವರಿಗೆ ಆಯುಷ್ಮಾನ್ ಕಾರ್ಡ್‌ಗೆ ನೋಂದಣಿ ಮಾಡಲಾಯಿತು. ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತಲ್ಲದೇ ಈ ವರ್ಷದ ಅದೃಷ್ಟವಂತ ಸದಸ್ಯರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡಿ, ಗೌರವಿಸಲಾಯಿತು.