

ಮುಳ್ಳೇರಿಯ: ನಾಡು ನುಡಿಗೆ ಬಹುಮುಖ ಆಯಾಮಗಳಲ್ಲಿ ಸೇವೆ ಸಲ್ಲಿಸಿದ ವಿಶಿಷ್ಟ ಸಾಧಕರ ಜೀವನಾದರ್ಶ, ಬದುಕಿನ ಪಥಗಳು ಹೊಸ ತಲೆಮಾರಿಗೆ ಮಾರ್ಗದರ್ಶಕವೂ, ಪ್ರೇರಣದಾಯಿ ಯಾಗಿರುತ್ತವೆ. ಅವನ್ನು ಪರಿಚಯಿಸುವ ಹೊತ್ತಗೆ ತರುವುದು ಸಮಾಜಕ್ಕೆ ನಾವು ನೀಡುವ ದೊಡ್ಡ ಕೊಡುಗೆಗಳಲ್ಲಿ ಒಂದು ಎಂದು ಪತ್ರಕರ್ತ ಪ್ರೊ.ವಿ.ಬಿ.ಅರ್ತಿಕಜೆ ಹೇಳಿದರು.
ದೇಲಂಪಾಡಿ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಶನಿವಾರ ಹಿರಿಯ ವೈದ್ಯ ರಮಾನಂದ ಬನಾರಿ ಬರೆದು ಪ್ರಕಟಿಸಿದ ಕನ್ನಡಿಯಲ್ಲಿ ಕನ್ನಡಿಗ ಕೃತಿಯ ಐದನೇ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಕೃತಿಕಾರ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಸಂಪಾದಕಿ ಡಾ.ಪ್ರಮೀಳಾ ಮಾಧವ ಕೃತಿಯ ಬಗ್ಗೆ ಮಾತನಾಡಿದರು. ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ.ವಸಂತ ಕುಮಾರ ಪೆರ್ಲ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಏತಡ್ಕ ವಂದಿಸಿದರು. ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು.
ಇದಕ್ಕೂ ಮುನ್ನ ಗಣಪತಿ ಹೋಮ, ಶ್ರೀ ಗೋಪಾಲಕೃಷ್ಣ ದೇವರ ಪೂಜೆ, ಶ್ರೀಮದ್ಭಗವದ್ಗೀತಾ ಪಾರಾಯಣ, ಕುಣಿತ ಭಜನೆ, ಯಕ್ಷಗಾನ ಗಾನಾರ್ಚನೆ, ಅಂಗನವಾಡಿ ಪುಟಾಣಿಗಳಿಂದ ನೃತ್ಯಾರ್ಚನೆ ನಡೆಯಿತು. ಸುಕೇಶ್ ಸುಳ್ಯ ಕಾರ್ಯಕ್ರಮ ನಿರ್ವಹಿಸಿದರು.