ಹಾವೇರಿ ಜಿಲ್ಲೆ ಹದಿನೈದು ಶಾಲೆಗಳಿಗೆ ‘ಪಿಎಂಶ್ರೀ’ ಪಟ್ಟ

Haveri Govt School
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂಶ್ರೀ (ಪಿಎಂ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಗೆ ಕಳೆದ ವರ್ಷ ಜಿಲ್ಲೆಯ ಆರು ಸರ್ಕಾರಿ ಶಾಲೆಗಳು ಆಯ್ಕೆಯಾಗಿದ್ದರೆ, ಈ ವರ್ಷ 9 ಶಾಲೆಗಳು ಆಯ್ಕೆಯಾಗಿವೆ. ಈ ಶಾಲೆಗಳಿಗೆ ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂ. ವಿಶೇಷ ಅನುದಾನ ದೊರೆಯುತ್ತಿದ್ದು, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗುತ್ತಿವೆ.

ಕೇಂದ್ರ ಶಿಕ್ಷಣ ಮಂತ್ರಾಲಯದ ಅಡಿಯಲ್ಲಿ 2020ರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಅನ್ವಯ ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. ಈ ಯೋಜನೆಯಡಿ ದೇಶಾದ್ಯಂತ ಮೊದಲ ಹಂತದಲ್ಲಿ 14,500 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ರಾಜ್ಯದಲ್ಲಿ 129 ಶಾಲೆಗಳ ಪೈಕಿ ಜಿಲ್ಲೆಯ ಆರು ಶಾಲೆಗಳು ಸೇರ್ಪಡೆಯಾಗಿದ್ದವು. ಈ ಬಾರಿ 9 ಶಾಲೆಗಳು ಆಯ್ಕೆಯಾಗಿದ್ದು, ಒಟ್ಟಾರೆ 15 ಶಾಲೆಗಳಿಗೆ ಪಿಎಂಶ್ರೀ ಪಟ್ಟ ದೊರೆತಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.

ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು, ಗುಣಮಟ್ಟದ ಬೋಧನೆ ಮತ್ತು ಕಲಿಕೆಯನ್ನು ನೀಡಲು ಅಗತ್ಯವಾದ ಎಲ್ಲ ರೀತಿಯ ವಾತಾವರಣವನ್ನು ಈ ಯೋಜನೆ ಸೃಷ್ಟಿಸಲಿದೆ. ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೆ ಇವು ಮಾರ್ಗದರ್ಶಿ ಹಾಗೂ ಮಾದರಿ ಶಾಲೆಗಳಾಗಿ ಬಲವರ್ಧನೆಗೊಳಿಸುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ.

ಮೊದಲ ಹಂತದಲ್ಲಿ ಆಯ್ಕೆಯಾಗಿದ್ದ ಶಾಲೆಗಳಿಗೆ ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಎಂಎಚ್​ಆರ್​ಡಿಯಿಂದ ಅನುಮೋದನೆ ಪಡೆದು ಕಾರ್ಯಾರಂಭ ಮಾಡಲಾಗಿದೆ. 5 ವರ್ಷಗಳ ಅವಧಿಯಲ್ಲಿ ಈ ಶಾಲೆಗಳು ಸಮಗ್ರವಾಗಿ ಮಾದರಿ ಶಾಲೆಗಳಾಗಿ ಪರಿವರ್ತನೆಯಾಗಲಿವೆ.

ಕೋಟ್ಯಂತರ ರೂ. ಅನುದಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಶಾಲೆಗಳ ಯೋಜನೆ ಅನುಷ್ಠಾನ, ಗುಣಮಟ್ಟ ಕಾಯ್ದುಕೊಳ್ಳುವಿಕೆ ಹಾಗೂ ಅನುದಾನ ಬಳಕೆಯ ಕುರಿತು ಆರಂಭದಲ್ಲಿಯೇ ನಿಗಾ ಇಡುವುದು ಸೂಕ್ತ.

ಯಾವ್ಯಾವ ಸೌಲಭ್ಯ ಸಿಗಲಿದೆ ? :

ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯ, ಐಸಿಟಿ ಲ್ಯಾಬ್, ಸ್ಮಾರ್ಟ್ ಕ್ಲಾಸ್, ಹಸಿರು ಶಾಲೆ, ಗ್ರಂಥಾಲಯ, ಕಲಿಕೋಪಕರಣಗಳು, ಸಿವಿಲ್ ಕಾಮಗಾರಿಗಳು, ಕುಡಿಯುವ ನೀರು, ಶೌಚಗೃಹ, ರಾಷ್ಟ್ರೀಯ ಆವಿಷ್ಕಾರ ಅಭಿಯಾನ, ಕ್ರೀಡೆ ಮತ್ತು ದೈಹಿಕ ಶಿಕ್ಷಣ, ಹೆಣ್ಣು ಮಕ್ಕಳಿಗೆ ಸ್ವ ರಕ್ಷಣಾ ತರಬೇತಿ, ಸಮುದಾಯ ಭಾಗವಹಿಸುವಿಕೆ, ವಿಶೇಷ ತರಬೇತಿ ಸೇರಿದಂತೆ ಹತ್ತಾರು ಬಗೆಯ ಸೌಲಭ್ಯಗಳು ಲಭ್ಯ.

ಬಾಕ್ಸ್

2022-23ರಲ್ಲಿ ಆಯ್ಕೆಯಾದ ಶಾಲೆಗಳು

ಕಳೆದ ವರ್ಷ ಬ್ಯಾಡಗಿ ತಾಲೂಕು ಚಿಕ್ಕಬಾಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾನಗಲ್ಲ ತಾಲೂಕು ಅಕ್ಕಿಆಲೂರಿನ ಸರ್ಕಾರಿ ಉರ್ದು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಹಾವೇರಿ ತಾಲೂಕು ಖೂರಗುಂದ ಗ್ರಾಮದ ಸರ್ಕಾರಿ ಪ್ರೌಢಶಾಲೆ, ರಾಣೆಬೆನ್ನೂರ ತಾಲೂಕು ಕುಪ್ಪೇಲೂರು ಗ್ರಾಮದ ಸರ್ಕಾರಿ ಮಾದರಿ ಹಿ.ಪ್ರಾ. ಶಾಲೆ, ಸವಣೂರ ತಾಲೂಕಿನ ಯಲವಿಗಿ ಗ್ರಾಮದ ಸರ್ಕಾರಿ ಹಿ.ಪ್ರಾ. ಶಾಲೆ ಹಾಗೂ ಶಿಗ್ಗಾಂವಿ ತಾಲೂಕು ಅಂದಲಗಿ ಗ್ರಾಮದ ಸ.ಹಿ.ಪ್ರಾ. ಶಾಲೆಗಳು 2022-23ರ ಸಾಲಿಗೆ ಪಿಎಂಶ್ರೀ ಯೋಜನೆಯ ಮೊದಲ ಹಂತದಲ್ಲಿ ಆಯ್ಕೆಯಾಗಿವೆ.

2023-24ರಲ್ಲಿ ಆಯ್ಕೆಯಾದ ಶಾಲೆಗಳು

ಗುತ್ತಲದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ, ಕಬ್ಬೂರಿನ ಕೆಎಸ್​ಜಿ ಮಾದರಿ ಪ್ರಾಥಮಿಕ ಶಾಲೆ, ನಾಗೇಂದ್ರನಮಟ್ಟಿಯ ಸ.ಹಿ.ಪ್ರಾ.ಶಾಲೆ, ವರಾಹದ ಪ್ರಾ.ಹಿ.ಶಾಲೆ, ತುಮ್ಮಿನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಹೆಣ್ಣು ಮಕ್ಕಳ ಶಾಲೆ, ರಾಣೆಬೆನ್ನೂರ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ-04, ಚಿಲ್ಲೂರಬಡ್ನಿಯ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆ, ಸವಣೂರಿನ ಸ.ಹಿ.ಪ್ರಾ.ಶಾಲೆ ಹಾಗೂ ಹುಲಗೂರಿನ ಸರ್ಕಾರಿ ಉನ್ನತೀಕರಿಸಿದ ಉರ್ದು ಶಾಲೆ 2023-24ನೇ ಸಾಲಿಗೆ ಆಯ್ಕೆಯಾಗಿವೆ.

ಪಿಎಂಶ್ರೀ ಅತ್ಯುತ್ತಮ ಯೋಜನೆಯಾಗಿದ್ದು, ಇದರಿಂದ ಶಾಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಆರಂಭಿಸಲಾಗುತ್ತಿದೆ. ಕೇಂದ್ರದಿಂದ ನೇರವಾಗಿ ಆಯಾ ತಾಲೂಕಿನ ಬಿಇಒ ಹಾಗೂ ಎಸ್​ಡಿಎಂಸಿ, ಮುಖ್ಯಾಧ್ಯಾಪಕರ ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಅಲ್ಲಿಂದಲೇ ಜಿ-ಟ್ಯಾಗ್ ಮೂಲಕ ಶಾಲೆಗಳ ಮೇಲೆ ನಿಗಾ ಇಡಲಾಗಿದೆ. ಡಿಡಿಪಿಐ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. | ಲತಾಮಣಿ ಟಿ.ಎಂ., ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ, ಶಿಕ್ಷಣ ಇಲಾಖೆ ನಮ್ಮ ಶಾಲೆ ಮೊದಲ ಹಂತದಲ್ಲಿ ಆಯ್ಕೆಯಾಗಿದ್ದು, ಶಾಲೆಯಲ್ಲಿ ಯೋಜನೆಯಡಿ ಸಿರಿಧಾನ್ಯ ಆಹಾರ ವಿತರಿಸಲಾಗುತ್ತಿದೆ. 3 ಕಂಪ್ಯೂಟರ್ ಅಳವಡಿಸಿ ಡಿಜಿಟಲ್ ಶಿಕ್ಷಣ ನೀಡಲಾಗುತ್ತಿದೆ. ಕುರ್ಚಿ, ಟೇಬಲ್, ಫ್ಯಾನ್, ಮತ್ತಿತರ ಅಗತ್ಯ ಪೀಠೋಪಕರಣಗಳೊಂದಿಗೆ ಕಲಿಕಾ ಕಾರ್ಯ ಭರದಿಂದ ಸಾಗಿದೆ. ಯೋಜನೆಯಿಂದ ಗ್ರಾಮದ ಮಕ್ಕಳಿಗೆ ಅನುಕೂಲವಾಗಿದೆ. | ರಮೇಶ ಹುಲ್ಮನಿ, ಮುಖ್ಯೋಪಾಧ್ಯಾಯ, ಸ.ಹಿ.ಪ್ರಾ. ಶಾಲೆ, ಕುಪ್ಪೇಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net