ಸೋಮವಾರಪೇಟೆ: ಪಟ್ಟಣದ ರೇಂಜರ್ಸ್ ಬ್ಲಾಕ್‌ನಲ್ಲಿರುವ ಶ್ರೀ ವನದುರ್ಗಿ ದೇವಾಲಯದ ಆಸ್ತಿಯನ್ನು ದೇವಾಲಯದ ಹೆಸರಿಗೆ ಕಂದಾಯ ಇಲಾಖೆ ಮಾಡಿಕೊಡಬೇಕು. ತಪ್ಪಿದಲ್ಲಿ ಬಿಜೆಪಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಕೃಷಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್‌ಚಂದ್ರ ಆಗ್ರಹಿಸಿದ್ದಾರೆ.
ರೇಂಜರ್ಸ್ ಬ್ಲಾಕ್‌ನ ಸರ್ವೇ ನಂ.46, 47, 48, 49 ಜಾಗದ 11 ಎಕರೆ ಜಾಗದ ಆರ್‌ಟಿಸಿಯಲ್ಲಿ ವಕ್ಪ್ ಬೋರ್ಡ್ ಹೆಸರು ಇದೆ. ದಾನಕೊಟ್ಟ ಐದೂವರೆ ಎಕರೆ ಜಾಗ ಮಾತ್ರ ವಕ್ಫ್ ಬೋರ್ಡ್‌ಗೆ ಸೇರಿದ್ದು, ಉಳಿದ ಜಾಗ ಶ್ರೀ ವನದುರ್ಗಿ ದೇವಾಲಯಕ್ಕೆ ಸೇರಿದ್ದಾಗಿದೆ. ಆ ಜಾಗದ ದಾಖಲಾತಿಯನ್ನು ದೇವಾಲಯದ ಹೆಸರಿಗೆ ಮಾಡಿಕೊಡಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ವಕ್ಫ್ ಸಚಿವ ಜಮೀರ್ ಆಹಮ್ಮದ್ ಖಾನ್ ಮೂಲಕ ಲ್ಯಾಂಡ್ ಜಿಹಾದ್‌ಗೆ ಕೈಹಾಕಿದ್ದು, ಈಗ ಕೊಡಗಿನಲ್ಲಿ ಹಿಂದುಗಳ ಕೆಲ ದೇವಾಲಯಗಳ ಆಸ್ತಿ ಮತ್ತು ಕೆಲ ರೈತರ ಆಸ್ತಿ ವಕ್ಫ್ ಬೋರ್ಡ್ ಖಾತೆಗೆ ಜಮೆಯಾಗಿವೆ ಎಂದು ದೂರಿದರು.
ರೇಂಜರ್ ಬ್ಲಾಕ್‌ನಲ್ಲಿ ದಾನಕೊಟ್ಟ ಐದೂವರೆ ಎಕರೆ ಜಾಗ ಮಾತ್ರ ವಕ್ಫ್ ಬೋರ್ಡ್‌ಗೆ ಸೇರಿದ್ದು, ಉಳಿದ ಜಾಗ ವನದುರ್ಗಿ ದೇವಾಲಯಕ್ಕೆ ಸೇರಿದ್ದು, ದಾನಕೊಟ್ಟ ಜಾಗದ ಬಗ್ಗೆ ಹಾಗೂ ಟ್ರಸ್ಟ್ ಬಗ್ಗೆ ತನಿಖೆಯಾಗಲಿ ಎಂದು ಎಂದು ಶ್ರೀ ವನದುರ್ಗಿ ದೇವಾಲಯದ ಸಮಿತಿ ಸದಸ್ಯ ಕೆ.ಎಸ್.ಪ್ರಕಾಶ್ ಒತ್ತಾಯಿಸಿದರು.
ಬಿಜೆಪಿ ಮಂಡಲ ವಕ್ತಾರ ಕಂಠಿ ಕಾರ್ಯಪ್ಪ ಮಾತನಾಡಿ, ವಕ್ಫ್ ಆಸ್ತಿಯನ್ನು ಸಾರ್ವಜನಿಕ ಆಸ್ತಿ ಎಂದು ಘೋಷಣೆ ಮಾಡಬೇಕು. ಒಂದು ಕೋಮಿನ ಜನರನ್ನು ಓಲೈಕೆ ಮಾಡಲು ಕಾಂಗ್ರೆಸ್ ಸರ್ಕಾರ ಬಡ ರೈತರು ಮತ್ತು ಹಿಂದು ದೇವಾಲಯದ ಆಸ್ತಿ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ನೋಟಿಸ್ ಜಾರಿಗೊಳಿಸುತ್ತಿದೆ. ಇದು ಕೋಮುಗಲಭೆ ಸೃಷ್ಟಿಯ ಹುನ್ನಾರ ಎಂದು ಆರೋಪಿಸಿದರು.
ಕೊಡಗಿನಲ್ಲೂ 16 ಕುಟುಂಬಗಳ ಆಸ್ತಿ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ಹೇಳಿದ್ದಾರೆ. ಜಾಗವನ್ನು ತೆರವುಗೊಳಿಸಲು ಮುಂದಾದರೆ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕೊಡಗಿನಲ್ಲಿ ಹಿಂದು ಮುಸ್ಲಿಂ ಸೌಹರ್ದತೆ ಇದೆ. ಹಿಂದುಗಳನ್ನು ಕೆಣಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಮುಡಾ ಹಗರಣದಿಂದ ಮುಖ್ಯಮಂತ್ರಿ ಬಚಾವ್ ಮಾಡಲು, ವಕ್ಫ್ ಬೋರ್ಡ್ ಜಾಗ ಒತ್ತುವರಿ ತೆರವಿನ ವಿಷಯವನ್ನು ಮುನ್ನೆಲೆಗೆ ತರಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಚಂದ್ರು, ಪ್ರಮುಖರಾದ ಕಿಬ್ಬೆಟ್ಟ ಮಧು ಇದ್ದರು.