

ಹನೂರು: ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನೇತೃತ್ವದ ತಂಡ ಶನಿವಾರ ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕ್ಷೇತ್ರ ಅಧ್ಯಯನ ನಡೆಸಿತು.
ಸರ್ಕಾರ 2023-24ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿ ಉತ್ತಮ ಕಾರ್ಯಸಾಧನೆಗೆ ಕಾರ್ಯತಂತ್ರವನ್ನು ಅನುಸರಿಸಿರುವ ಗ್ರಾಪಂಗಳಿಗೆ ಕ್ಷೇತ್ರ ಅಧ್ಯಯನ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಈ ದಿಸೆಯಲ್ಲಿ ರೊಟ್ಟಿಗವಾಡ ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಹಜರೇಸಾಬ್ ನದಾಪ್ ಹಾಗೂ ಪಿಡಿಒ ಉಮೇಶ್‌ಗೌಡ ಬಿ.ತುಪ್ಪದಗೌಡ ನೇತೃತ್ವದಲ್ಲಿ ಆಗಮಿಸಿದ 17 ಜನರ ತಂಡವನ್ನು ಮಂಗಲ ಗ್ರಾಪಂ ಆಡಳಿತದಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭ ಆಯೋಜಿಸಿದ್ದ ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆ, ಅಮೃತ ಗ್ರಾಪಂ ಯೋಜನೆ, 15ನೇ ಹಣಕಾಸು ಹಾಗೂ ಇನ್ನಿತರ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಚಿತ್ರ ಪ್ರದರ್ಶನದ ಮೂಲಕ ಆಗಮಿಸಿದ ಕ್ಷೇತ್ರ ಅಧ್ಯಯನ ತಂಡಕ್ಕೆ ತಿಳಿಸಿ ಕೊಡಲಾಯಿತು. ಕೃಷಿ ಸಖಿಯರಿಂದ ಕೃಷಿ ಅಭಿವೃದ್ಧಿಗೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಕೈಗೊಂಡ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಹಿತಿ ತಿಳಿಸಲಾಯಿತು. ಬಳಿಕ ಸರ್ಕಾರಿ ಶಾಲೆ, ಡಿಜಿಟಲ್ ಗ್ರಂಥಾಲಯ, ಕಾಳಿಂಗನ ಕೆರೆ ಹಾಗೂ ಇನ್ನಿತರ ಕಡೆಗಳಿಗೆ ತೆರಳಿದ ಕ್ಷೇತ್ರ ಅಧ್ಯಯನ ತಂಡದ ಸದಸ್ಯರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಈ ವೇಳೆ ಅಗತ್ಯ ಮಾಹಿತಿ ಒದಗಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಉಮಾ, ಉಪಾಧ್ಯಕ್ಷೆ ಶಿವಲಾಂಬಿಕ, ಪಿಡಿಒ ದೊರೆಯಾ, ನೌಕರ ವಸಂತ್‌ಕುಮಾರ್ ಹಾಗೂ ಗ್ರಾಪಂ ಸದಸ್ಯರು ಇದ್ದರು.