

ಕಲಘಟಗಿ: ಈ ಗೋಡೆಗಳ ಮೇಲೆ ಹಲವು ವರ್ಷಗಳಿಂದ ಪಾಚಿ ಕಟ್ಟಿಕೊಂಡು, ನೋಡುಗರಿಗೆ ಇದು ಸರ್ಕಾರಿ ಕಟ್ಟಡವೋ ಅಥವಾ ಪಾಳು ಬಿದ್ದ ಬಂಗಲೆಯೋ ಅಂಥ ಕರೆಸಿಕೊಳ್ಳುತ್ತಿದ್ದ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕಚೇರಿ ಇದೀಗ ಕಣ್ಮನ ಸೆಳೆಯುವಂತೆ ಚಿತ್ತಾಕರ್ಷಕಗೊಂಡಿದೆ.
ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹ, ಮಕ್ಕಳ ಪಠ್ಯ-ಪುಸ್ತಕಗಳು, ಸಮವಸ್ತ್ರ ಸೇರಿದಂತೆ ಇನ್ನು, ಹತ್ತು ಹಲವು ಚಟುವಟಿಕೆಗಳಿಂದ ಗಿಜಿಗಿಜಿ ಎನ್ನುತ್ತ ಹಾಳು ಬಂಗಲೆಯಂತೆ ಭಾಸವಾಗುತ್ತಿದ್ದ ಕ್ಷೇತ್ರ ಸಂಪನ್ಮೂಲ ಕಚೇರಿ ಇದೀಗ ಮೈತುಂಬ ಬಣ್ಣ ಬಳಿದುಕೊಂಡು ಸಿಂಗಾರದಂತೆ ರೂಪಗೊಂಡು ನೋಡುಗರ ಕಣ್ಮನ ಸೆಳೆಯುವಂತೆೆ ಗೋಚರಿಸುತ್ತಿದೆ.
ಕಳೆದೊಂದು ತಿಂಗಳಿನಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಕುಮಾರ್ ಕೆ.ಎಫ್. ಅವರ ಮಾರ್ಗದರ್ಶನದಲ್ಲಿ ಸಿಆರ್‌ಪಿ (ಸಮೂಹ ಸಂಪನ್ಮೂಲ ವ್ಯಕ್ತಿ), ಬಿಆರ್‌ಪಿ (ಬ್ಲಾಕ್ ಸಂಪನ್ಮೂಲ ವ್ಯಕ್ತಿ) ಹಾಗೂ ಸಿಬ್ಬಂದಿ ಗ್ಗೂಡಿಕೊಂಡು ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ಒಂದು ಹೊಸ ರೂಪ ತರಬೇಕೆಂಬ ಸದುದ್ದೇಶದಿಂದ ಯಾವುದೇ ಅನುದಾನ ಬಳಕೆ ಮಾಡದೆ ಸ್ವಂತ ಖರ್ಚಿನಲ್ಲಿ ಕೇಂದ್ರವನ್ನು ಚಿತ್ರಮಯ ಮಾಡುವಲ್ಲಿ ಸಾಕ್ಷಿಯಾಗಿದ್ದಾರೆ.
ಚಿತ್ರಕಲಾ ಶಿಕ್ಷಕರಾದ ಸಿಕಂದರ ಹೊಸಳ್ಳಿ, ಎನ್.ಎಂ. ಕಂಬಾರ, ಎ.ಬಿ. ದಂಡಪ್ಪನವರ, ಅನಿಲಕುಮಾರ ಹುರಿಗೋಳ ಅವರುಗಳ ಕೈ ಕುಂಚದಲ್ಲಿ ಅರಳಿದ ಈ ಕಲಾಕೃತಿಗಳಿಗೆ ಶಾಲಾ ಶಿಕ್ಷಕರು, ಸಿಆರ್‌ಪಿ ಹಾಗೂ ಬಿಆರ್‌ಪಿ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಪಾಳು ಬಂಗಲೆ ಅಂತಾ ಕರೆಸಿಕೊಳ್ಳುವ ಕ್ಷೇತ್ರ ಸಂಪನ್ಮೂಲ ಕೇಂದ್ರ ಇದೀಗ ರಂಗು ರಂಗಿನ ಚಿತ್ರಗಳಿಂದ ಮಕ್ಕಳ ಹಾಗೂ ಪೋಷಕರ ಗಮನ ಸೆಳೆಯುತ್ತಿದೆ.
ವಿಶೇಷ ಚಿತ್ರಣಗಳು: ಕ್ಷೇತ್ರ ಸಂಪನ್ಮೂಲ ಕೇಂದ್ರ ಗೋಡೆಗಳ ಮೇಲೆ ಮಕ್ಕಳಿಗೆ ನೀಡಲಾಗುತ್ತಿರುವ ಮೊಟ್ಟೆ, ಹಾಲು, ಬಿಸಿಯೂಟ, ಪಠ್ಯ-ಪುಸ್ತಕಗಳ ವಿತರಣೆ, ಸಮವಸ್ತ್ರ, ಆರೋಗ್ಯ ತಪಾಸಣೆ, ಸೈಕಲ್ ವಿತರಣೆ, ಮಕ್ಕಳಿಗೆ ನೀಡಲಾಗುತ್ತಿರುವ ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಪ್ರತಿಭಾ ಕಾರಂಜಿ, ಕ್ರೀಡೆ ಸೇರಿದಂತೆ ಇನ್ನು ಹತ್ತು ಹಲವು ರೀತಿ ಮಕ್ಕಳ ಮೇಲೆ ಪರಿಣಾಮ ಬೀರುವ ಚಿತ್ರಗಳನ್ನು ಬಿಡಿಸಲಾಗಿದೆ.
ಹಲವು ವರ್ಷಗಳಿಂದ ಸಂಪನ್ಮೂಲ ಕೇಂದ್ರ ಯಾವುದೇ ಆಕರ್ಷಣೆ ಇಲ್ಲದೆ ಹಾಳು ಬಂಗಲೆಯಂತೆ ಭಾಸವಾಗುತ್ತಿರುವುದನ್ನು ಗಮನಿಸಿದ ಎಲ್ಲ ಸಿಆರ್‌ಪಿ ಹಾಗೂ ಬಿಆರ್‌ಸಿ ಸಿಬ್ಬಂದಿ ವೈಯಕ್ತಿಕವಾಗಿ ಹಣ ವೆಚ್ಚ ಮಾಡಿ ಕೇಂದ್ರ ಸುಂದರ ಚಿತ್ತಾಕರ್ಷಗೊಳಿಸುವಲ್ಲಿ ಸಾಕ್ಷಿಯಾಗಿರುವುದು ಸಂತಸ ತಂದಿದೆ> ಉಮಾದೇವಿ ಬಸಾಪೂರ, ಕ್ಷೇತ್ರ ಶಿಕ್ಷಣಾಧಿಕಾರಿ