

ಸಿರಿಗೆರೆ: ವಿದ್ಯಾರ್ಥಿಗಳಲ್ಲಿ ಕ್ರೀಡಾಭಿಮಾನವನ್ನು ಮೂಡಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‌ಕುಮಾರ್ ಹೇಳಿದರು.
ಚಿತ್ರದುರ್ಗದ ಮರುಘರಾಜೇಂದ್ರ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿರೇಗುಂಟನೂರು ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಕ್ರೀಡೆ ಹಾಗೂ ಯೋಗದ ಅವಶ್ಯಕತೆ ಇದೆ ಎಂದರು.
ಕ್ರೀಡೆಗಳಲ್ಲಿ ಭಾಗವಹಿಸಲು ಕ್ರೀಡಾಮನೋಭಾವನೆ ಇರಬೇಕು. ಮನಸ್ಸಿನ ಶಾಂತಿಗಾಗಿ ಕ್ರೀಡೆ ಅವಶ್ಯ. ಮಕ್ಕಳು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಲು ಕ್ರೀಡೆಗಳು ಸಹಕಾರಿ ಎಂದು ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಚಿದಾನಂದ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ ಕ್ರೀಡಾ ಸ್ಪರ್ಧೆಗಳಲ್ಲೂ ಭಾಗವಹಿಸಬೇಕು.
ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ದೇಶವನ್ನು ಪ್ರತಿನಿಧಿಸುವ ಸೌಭಾಗ್ಯ ದೊರಕಲಿ ಎಂದು ಆಶಿಸಿದರು.
ಮುಖ್ಯ ಶಿಕ್ಷಕ ಡಾ.ಮಹೇಶ್ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಂತೆ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.
ತರಗತಿಯ ಪಾಠಕ್ಕೆ ಹೆಚ್ಚಿನ ಆದ್ಯತೆ ನೀಡಿ ಕ್ರೀಡೆಗಳಿಗೆ ಮನ್ನಣೆ ನೀಡದಂತಹ ಮನಸ್ಥಿತಿಯಿಂದ ನಾವು ಹೊರಬರಬೇಕು ಎಂದರು.
ಕ್ರೀಡಾಕೂಟದಲ್ಲಿ ಹಿರೇಗುಂಟನೂರು ಹೋಬಳಿಯ 22 ಪ್ರೌಢಶಾಲೆಯ 800 ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚನ್ನಬಸಪ್ಪ, ಮುಖ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೀರ್ತಿಕುಮಾರ್, ಪಾಪಣ್ಣ, ಚನ್ನಯ್ಯ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಕಲ್ಲೇಶ್ ಮೌರ್ಯ, ತಾಲೂಕು ಅಧ್ಯಕ್ಷ ಅಶೋಕ್ ಇತರರಿದ್ದರು.