

ಚನ್ನಗಿರಿ: ಶಾಲಾ ಮರು ಪ್ರಾರಂಭಕ್ಕೆ ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆ ಸೇರಿ ಎಲ್ಲ ಶಾಲೆಗಳ ಬಾಗಿಲು ತೆರೆದು ಸ್ವಚ್ಛಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುವಾರ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
ಮುಖ್ಯಶಿಕ್ಷಕ ಹಾಗೂ ಶಿಕ್ಷಕರು, ಅಡುಗೆ ಸಿಬ್ಬಂದಿ ಕೈಯಲ್ಲಿ ಪೊರಕೆ ಹಿಡಿದು ಶಾಲೆಯ ಪ್ರತಿಯೊಂದು ಕೊಠಡಿ, ಅಡುಗೆ ಮನೆ, ಶೌಚಗೃಹಗಳನ್ನು ಸ್ವಚ್ಛಗೊಳಿಸಿದರು. ಬೇಸಿಗೆ ರಜೆ ಕಳೆದು ಶಾಲೆಗಳ ಪ್ರಾರಂಭಕ್ಕೆ ಸಿದ್ಧತೆ ನಡೆದಿದೆ. ಮೇ 30 ರಿಂದ 1-10ನೇ ತರಗತಿವರೆಗಿನ ವಿದ್ಯಾರ್ಥಿಗಳ ದಾಖಲಾತಿ ಶುರುವಾಗಲಿದೆ. ವಿದ್ಯಾರ್ಥಿಗಳಿಗೆ ಹೂ ನೀಡುವ ಮೂಲಕ ಸ್ವಾಗತವನ್ನು ಕೋರಬೇಕಿದೆ ಎಂದರು.
ಈಗಾಗಲೇ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಗಳು ಬಂದಿದೆ. ಶಾಲಾ ಮುಖ್ಯಶಿಕ್ಷಕರ ಮೂಲಕ ಶಾಲೆಗೆ ಕಳುಹಿಸಿಕೊಡಲಾಗಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ಶಾಲೆಗೆ ಗ್ಯಾಸ್ ಸಿಲಿಂಡರ್, ಅಕ್ಕಿ, ಬೇಳೆ, ಶುದ್ಧ ಕುಡಿಯುವ ನೀರು ವಿತರಿಸಲಾಗಿದೆ. ಶಾಲಾ ಪ್ರಾರಂಭದ ದಿನದಿಂದ ಬರುವಂತಹ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ, ಸಿಆರ್ಪಿ ನಾಗರಾಜ್, ಶಿಕ್ಷಕಿಯರಾದ ಆಶಾ, ಪವಿತ್ರಾ, ಪುಷ್ಪಲತಾ, ಎಸ್ಡಿಎಂಸಿ ಅಧ್ಯಕ್ಷ ಸ್ವಾಮಿ, ಸರದಾರ್ ಇದ್ದರು.