

ಚನ್ನಗಿರಿ: ವಿದ್ಯಾರ್ಥಿಗಳಲ್ಲಿ ಗ್ರಹಿಸುವ ಶಕ್ತಿ ಇದೆ. ಪರೀಕ್ಷೆ ಗುರಿಯಾಗಬೇಕು, ಪರೀಕ್ಷೆ ಸಮೀಪದಲ್ಲಿದೆ ಎನ್ನುವ ಆತಂಕ ಮರೆತು ಅನುಭವಿಸಿ ಬರೆದಲ್ಲಿ ಸುಲಭವಾಗಿ ಶೇ.100 ರಷ್ಟು ಅಂಕ ಪಡೆಯಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ತಿಳಿಸಿದರು.
ತಾಲೂಕಿನ ಬಾಲಿಕಾ ಪ್ರೌಢಶಾಲೆಯಲ್ಲಿ ಗುರುವಾರ 2024-25ನೇ ಸಾಲಿನ ಶೇ.95 ರಷ್ಟು ಅಂಕ ಪಡೆದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆರು ವಿಷಯಗಳ ಕುರಿತು 3 ದಿನದ ಪರೀಕ್ಷೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆದಿದೆ. ಅದರಲ್ಲಿ ಶೇ.95ರಷ್ಟು ಮತ್ತು ಅಧಿಕ ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪಠ್ಯದ ವಿಷಯಗಳಲ್ಲಿನ ಅನುಮಾನವನ್ನು ಬಗೆಹರಿಸಿ ಶೇ.100 ರಷ್ಟು ಅಂಕ ಪಡೆಯುವಂತೆ ಮಾಡುವುದು ಈ ತರಬೇತಿ ಉದ್ದೇಶವಾಗಿದೆ ಎಂದರು.
ಕಳೆದ ಸಾಲಿನಲ್ಲಿ ಚನ್ನಗಿರಿ ತಾಲೂಕು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 622 ಅಂಕವನ್ನು ಗಳಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಈ ಬಾರಿಯು ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಹೋಗುವಲ್ಲಿ ವಿದ್ಯಾರ್ಥಿಗಳು ಶ್ರಮ ಪಡಬೇಕು. ಪರೀಕ್ಷೆಯನ್ನು ಹಬ್ಬದಂತೆ ಭಾವಿಸಿ ಸುಲಭವಾಗಿ ಉತ್ತೀರ್ಣರಾಗಬಹುದು ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ಕಲಿಕೆಗಾಗಿ ಸಾವಿರಾರು ಕೋಟಿ ಅನುದಾನ ನೀಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸುತ್ತಿದೆ. ಅದರ ಪ್ರಯೋಜನವನ್ನು ಪಡೆದು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ವಿದ್ಯಾರ್ಥಿಗಳು ಬರಬೇಕು. ನೂರರಷ್ಟು ಅಂಕವನ್ನು ಪಡೆದರೆ ನೀವು ಬಯಸುವ ಪಿಯು ಕಾಲೇಜುಗಳಲ್ಲಿ ಉಚಿತವಾಗಿ ದಾಖಲಾತಿ ಪಡೆಯಲು ಅವಕಾಶವಿದೆ ಎಂದು ಹೇಳಿದರು.
ಪರೀಕ್ಷೆಯಲ್ಲಿ 625 ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ ಚನ್ನಗಿರಿ ಕ್ಷೇತ್ರದ ಶಾಸಕರು ಗೌರವಿಸಿ 1 ಲಕ್ಷ ರೂ. ನಗದು ಬಹುಮಾನವನ್ನು ವೈಯಕ್ತಿಕವಾಗಿ ನೀಡಲಿದ್ದಾರೆ ಎಂದರು.
ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿನ ಪೆಶ್ನೆಗಳಿಗೆ ಉತ್ತರ ಮತ್ತು ಪರೀಕ್ಷೆಯನ್ನು ಯಾವ ರೀತಿಯಲ್ಲಿ ಬರೆಯುವ ಕುರಿತು ಮಾಹಿತಿಯನ್ನು ನೀಡಲಾಯಿತು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ. ಸ್ವಾಮಿ, ಸಹಶಿಕ್ಷಕರ ಸಂಘದ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ರಾಮಚಂದ್ರಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಷಣ್ಮುಖ, ಷಡಾಕ್ಷರಿ, ಇಸಿಒ ಮೌನೇಶ್ವರಚಾರ್ ಇದ್ದರು.