

ಹುಬ್ಬಳ್ಳಿ: ಪುಣೆಯ ಫ್ರಿಡಂ ಫ್ರಾಮ್ ಡಯಾಬಿಟಿಸ್ (ಎಫ್ಎಫ್ ಡಿ- ಮಧುಮೇಹದಿಂದ ಮುಕ್ತಿ) ಸಂಸ್ಥೆಯ ಹುಬ್ಬಳ್ಳಿ ಕ್ಲಬ್ ವತಿಯಿಂದ ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ಮಧುಮೇಹಿಗಳ, ಸಂಭಾವ್ಯ ಮಧುಮೇಹಿಗಳ ಆರೋಗ್ಯ ಮಾರ್ಗದರ್ಶನಕ್ಕಾಗಿ ಭೇಟಿ, ಅಭಿನಂದನೆ ಮತ್ತು ಆಸ್ವಾದನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪುಣೆಯಿಂದ ಆಗಮಿಸಿದ್ದ ಸಂಸ್ಥೆಯ ವ್ಯಾಯಾಮ ವಿಭಾಗದ ಉಪವ್ಯವಸ್ಥಾಪಕ ಡಾ. ಶುಭಾಂಕರ ಮಹಾಪುರೆ ಅವರು, ದೈಹಿಕ ಆರೋಗ್ಯಕ್ಕೆ ಶಕ್ತಿ, ಸಾಮರ್ಥ್ಯ ಮತ್ತು ಮೃದುತ್ವಗಳ (ಸ್ಟ್ರೆಂತ್, ಸ್ಟೆಮಿನಾ ಹಾಗೂ ಫ್ಲೆಕ್ಸಿಬಿಲಿಟಿ) ಮಹತ್ವವನ್ನು ಮತ್ತು ಯಾವ ಯಾವ ರೀತಿಯ ವ್ಯಾಯಾಮಗಳಿಂದ ದೇಹದ ಆರೋಗ್ಯವನ್ನು ಕಾಯ್ದುಕೊಳ್ಳಬಹುದೆಂದು ತಿಳಿಸಿಕೊಟ್ಟರು.
ಮಧುಮೇಹ, ರಕ್ತದೊತ್ತಡ ಇತ್ಯಾದಿ ಸಮಸ್ಯೆಗಳಿಂದ ಮುಕ್ತಹೊಂದಿದ 30ಕ್ಕೂ ಹೆಚ್ಚು ಸದಸ್ಯರು ಹಾಜರಿದ್ದು, ಡಾ. ಶುಭಾಂಕರ ಅವರೊಂದಿಗೆ ಹಲವು ಬಗೆಯ ದೈಹಿಕ ಚಟುವಟಿಕೆಗಳನ್ನು ಮಾಡಿ ಉಲ್ಲಸಿತರಾದರು.
ಹಿರಿಯ ಸದಸ್ಯ 81 ವರ್ಷದ ಪ್ರಕಾಶ ಚಾಂದೋರಕರ ಉತ್ಸಾಹದಿಂದ ಪಾಲ್ಗೊಂಡು ಮಾದರಿಯಾದರು. ಧಾರವಾಡದ ವೀರನಾರಾಯಣ ಕುಲಕರ್ಣಿ ಮಾತನಾಡಿದರು.
ಹುಬ್ಬಳ್ಳಿ ಎಫ್ಎಫ್ ಡಿ ಕ್ಲಬ್ ಸಂಚಾಲಕಿ ವಿಜಯಾ ಇಂಗಳೆ, ವಿಜಯಲಕ್ಷ್ಮಿದೇಶಪಾಂಡೆ, ಪ್ರೀತಿ ಠಕ್ಕರ, ವಾಸಂತಿ ಕೇಸರಕರ ಇವರ ಉಸ್ತುವಾರಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.
ಬೆಳಗಾವಿ ಮತ್ತು ಧಾರವಾಡಗಳಲ್ಲಿಯೂ ಡಾ. ಶುಭಾಂಕರ ಅವರು ನಡೆಸಿಕೊಟ್ಟ ಕಾರ್ಯಕ್ರಮಗಳಲ್ಲಿ ಹಲವಾರು ಸದಸ್ಯರು ಭಾಗವಹಿಸಿ ಲಾಭ ಪಡೆದರು.