ಭ್ರೂಣ ಹತ್ಯೆ ಇಳಿಕೆ ಲಿಂಗಾನುಪಾತ ಏರಿಕೆ: ಆರ್‌ಸಿಎಚ್‌ನಲ್ಲಿ ಅಂಕಿ ಅಂಶ ಪ್ರಕಟ

Feticide declines And sex ratio increases Mandya
Published on

ಮಂಡ್ಯ: ಭ್ರೂಣ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಿಂದ ಜಿಲ್ಲೆಯ ಪ್ರತಿಷ್ಠೆಗೆ ಕಳಂಕ ತಂದಿತ್ತು. ಆದರೆ ಆರೋಗ್ಯ ಇಲಾಖೆ ದಿಟ್ಟ ಕ್ರಮ ವಹಿಸಿದ್ದರ ಪರಿಣಾಮ ಭ್ರೂಣ ಹತ್ಯೆಗೆ ಕಡಿವಾಣ ಬಿದ್ದಿದೆ. ಪರಿಣಾಮ ಗಂಡು ಮತ್ತು ಹೆಣ್ಣಿನ ಲಿಂಗಾನುಪಾತ ಗಣನೀಯವಾಗಿ ಏರಿಕೆ ಕಂಡಿರುವುದು ಒಂದೊಳ್ಳೆ ವಿಷಯವಾಗಿದೆ.

ಹೆಣ್ಣು ಭ್ರೂಣ ಹತ್ಯೆ ವಿಚಾರದಲ್ಲಿ ಜಿಲ್ಲೆ ಕುಖ್ಯಾತಿಗೆ ಒಳಗಾಗಿತ್ತು. ಆದರಲ್ಲೂ ಕಳೆದ ವರ್ಷದ ಬಯಲಾಗಿದ್ದ ದಂಧೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಇದಕ್ಕೆ ಕಡಿವಾಣ ಹಾಕಬೇಕೆಂಬ ದೃಢ ನಿರ್ಧಾರದೊಂದಿಗೆ ಆರೋಗ್ಯ ಇಲಾಖೆ ವಹಿಸಿ ಶ್ರಮ ಫಲಿಸಿದೆ. ರೆಪ್ರೊಡ್ಯೂಕ್ಟಿವ್ ಮತ್ತು ಚೈಲ್ಡ್ ಹೆಲ್ತ್(ಆರ್‌ಸಿಎಚ್) ವರದಿಯ ಪ್ರಕಾರ 2024ರ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಪ್ರತಿ ಸಾವಿರ ಗಂಡಿಗೆ 869 ಹೆಣ್ಣು ಮಕ್ಕಳಿದ್ದರು. ಪ್ರಸಕ್ತ ಸಾಲಿನ ಆಗಸ್ಟ್‌ನಲ್ಲಿ ಪ್ರಕಟಗೊಂದಿರುವ ವರದಿಯಲ್ಲಿ ಪ್ರತಿ ಸಾವಿರ ಗಂಡಿಗೆ 930ರ ಆಸುಪಾಸಿನಲ್ಲಿ ಹೆಣ್ಣು ಮಕ್ಕಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 61 ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

ಬೆಚ್ಚಿಬೀಳಿಸಿದ್ದ ದಂಧೆ: ಭ್ರೂಣ ಪತ್ತೆ ದಂಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿತ್ತು. ಪರಿಣಾಮ ಭ್ರೂಣ ಪತ್ತೆಗೆಂದು ಮಂಡ್ಯ ಮಾತ್ರವಲ್ಲದೆ ಮೈಸೂರು, ಬೆಂಗಳೂರು ಭಾಗದಿಂದಲೂ ಬರುತ್ತಿದ್ದರು. ಈ ನಡುವೆ ಕಳೆದ ವರ್ಷ ಬೆಂಗಳೂರಿನಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದು ಜಿಲ್ಲೆಯ ಹೆಸರು ಕೇಳಿಬಂತು. ಬಳಿಕ ವಿಚಾರಣೆ ತೀವ್ರಗೊಳಿಸುತ್ತಾ ಹೋದಂತೆ ಒಂದೊಂದೇ ಪ್ರಕರಣ ಬಯಲಿಗೆ ಬರಲಾರಂಭಿಸಿತು. ಮೊದಲು ಪಾಂಡವಪುರ, ಬಳಿಕ ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭ್ರೂಣ ಪತ್ತೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆಯಲಾಯಿತು. ಆದಾಗ್ಯೂ ದಂಧೆಗೆ ಸಂಪೂರ್ಣ ಕಡಿವಾಣ ಬೀಳಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟರು.

ಆ ವೇಳೆ ಹಲವರನ್ನು ಬಂಧಿಸಲಾಗಿತ್ತು. ಅದು ಆರೋಗ್ಯ ಇಲಾಖೆಗೆ ಸಿಕ್ಕ ದೊಡ್ಡ ಯಶಸ್ಸಾಗಿತ್ತು. ಹಲವರು ಬಂಧನಕ್ಕೆ ಒಳಗಾಗಿದ್ದಾರೆಂದು ಆರೋಗ್ಯ ಇಲಾಖೆ ಸುಮ್ಮನಾಗಲಿಲ್ಲ. ಮತ್ತೆ ಇಂತಹ ದಂಧೆ ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆ ಕ್ರಮ ವಹಿಸಲಾಯಿತು. ಎಲ್ಲ ಖಾಸಗಿ ಆಸ್ಪತ್ರೆ, ಸ್ಕಾೃನಿಂಗ್ ಸೆಂಟರ್ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಮುಖ್ಯವಾಗಿ ತಡವಾಗಿ ಅಂದರೆ ಮೂರು ತಿಂಗಳ ಬಳಿಕ ಸ್ಕಾೃನಿಂಗ್‌ಗೆ ಬರುವ ಮಹಿಳೆಯರ ಬಗ್ಗೆ ಅದರಲ್ಲಿಯೂ ಮೊದಲ ಮಗು ಹೆಣ್ಣಾಗಿರುವಂತವರಿದ್ದರೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿತ್ತು. ಒಟ್ಟಾರೆ ಎಲ್ಲ ಕ್ರಮವೂ ಪರಿಣಾಮ ಬೀರಿದೆ.

ಜಿಲ್ಲೆಯ ಗಂಡು ಮತ್ತು ಹೆಣ್ಣಿನ ನಡುವಿನ ಲಿಂಗಾನುಪಾತದ ಅಂಕಿ ಅಂಶ ಗಮನಿಸಿದರೆ ಪ್ರತಿ ಸಾವಿರ ಪುರುಷರಿಗೆ ಹೆಣ್ಣಿನ ಸಂಖ್ಯೆ 2014-15ರಲ್ಲಿ 919, 2015-16ರಲ್ಲಿ 922, 2016-17ರಲ್ಲಿ 914, 2017-18ರಲ್ಲಿ 912, 2018-19ರಲ್ಲಿ 917, 2019-20ರಲ್ಲಿ 898, 2020-21ರಲ್ಲಿ 884, 2021-22ರಲ್ಲಿ 890 ಮತ್ತು 2022-23ರಲ್ಲಿ 875 ಇತ್ತು. ಇನ್ನು ಭ್ರೂಣ ಪತ್ತೆ ಮತ್ತು ಹತ್ಯೆ ವಿಚಾರದಲ್ಲಿ ಎಚ್ಚರ ತಪ್ಪದ ಇಲಾಖೆ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ. ಅಂತೆಯೇ ಇತ್ತೀಚೆಗೆ ಜಿಲ್ಲೆಯಲ್ಲಿ ಎರಡು ತಾಲೂಕಿನಲ್ಲಿ ಭ್ರೂಣ ಪತ್ತೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಹರಿದಾಡಿತ್ತು. ಆ ವೇಳೆ ದಾಳಿ ಮಾಡಿದ್ದು, ಸ್ಕಾೃನಿಂಗ್ ನಡೆಯುತ್ತಿರುವುದು ಪತ್ತೆಯಾಗಿಲ್ಲ.

‘ಡೆಕಾಯ್ ಪ್ಲಾೃನ್’ ಯಶಸ್ಸು

ಪಾಂಡವಪುರ, ಮೇಲುಕೋಟೆ ದಾಳಿ ಬಳಿಕ ನಾಗಮಂಗಲ ತಾಲೂಕಿನಲ್ಲಿ ಭ್ರೂಣ ಪತ್ತೆಯ ಮಾಹಿತಿ ಬಂದಿತ್ತು. ಇಲ್ಲಿ ಆರೋಪಿಗಳನ್ನು ಬಯಲಿಗೆಳೆಯಲು ಆರೋಗ್ಯ ಇಲಾಖೆ ಬಳಸಿದ ತಂತ್ರ ಡೆಕಾಯ್. ಇದು ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತ್ತು. ಡೆಕಾಯ್ ಪ್ಲಾೃನ್ ಎಂದರೆ ಇಲಾಖೆಯಿಂದಲೇ ಮಹಿಳೆಯೊಬ್ಬರನ್ನು ನೇಮಿಸಿ, ಅವರಿಗೆ ಭ್ರೂಣ ಪತ್ತೆ ಮಾಡುವಂತೆ ಆರೋಪಿಗಳಿಗೆ 20 ಸಾವಿರ ರೂ ಕೊಡಲಾಗಿತ್ತು. ಈ ವೇಳೆ ಭ್ರೂಣ ಪತ್ತೆ ಮಾಡುವ ವೇಳೆಯೇ ಆರೋಪಿಗಳನ್ನು ಪೊಲೀಸರ ಸಹಾಯದಿಂದ ವಶಕ್ಕೆ ಪಡೆದು ಹಣವನ್ನು ಪಡೆದುಕೊಳ್ಳಲಾಗಿತ್ತು.

ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ದಂಧೆಗೆ ಕಡಿವಾಣ ಹಾಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ‘ಡೆಕಾಯ್ ಪ್ಲಾೃನ್’ ಸೇರಿದಂತೆ ಕೆಲ ತಂತ್ರ ಅನುಸರಿಸಿದ ಪರಿಣಾಮ ನಾಗಲೋಟದಲ್ಲಿ ನಡೆಯುತ್ತಿದ್ದ ಭ್ರೂಣ ಪತ್ತೆ ಹಾಗೂ ಹತ್ಯೆಯನ್ನು ತಡೆಯುವಲ್ಲಿ ಸಫಲವಾಯಿತು. ಈ ಹಿನ್ನೆಲೆಯಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ಕಾಯ್ದೆ(ಪಿಸಿಪಿಎನ್‌ಡಿಟಿ) ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಜಿಲ್ಲಾ ಆರೋಗ್ಯ ಇಲಾಖೆಗೆ ಪ್ರಶಸ್ತಿ ಜತೆಗೆ ಅಭಿನಂದನೆ ಸಿಕ್ಕಿತ್ತು.

ಆರ್‌ಸಿಎಚ್‌ನಲ್ಲಿ ಪ್ರಕಟವಾಗಿ ವರದಿಯಂತೆ ಜಿಲ್ಲೆಯ ಲಿಂಗಾನುಪಾತಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಪ್ರತಿ ಸಾವಿರ ಗಂಡಿಗೆ 869 ಹೆಣ್ಣಿನ ಪ್ರಮಾಣವಿತ್ತು. ಈ ವರ್ಷ 930ಕ್ಕೆ ಏರಿಕೆಯಾಗಿದೆ. ಇದು ಉತ್ತಮ ಬೆಳವಣಿಗೆ. ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕಿದ್ದರ ಪರಿಣಾಮ ಲಿಂಗಾನುಪಾತದಲ್ಲಿ ಏರಿಕೆ ಕಂಡಿದೆ. ಮುಂದಿನ ವರ್ಷ ಇನ್ನಷ್ಟು ಸುಧಾರಣೆಯಾಗಲಿದೆ. ಜಿಲ್ಲೆಯಲ್ಲಿ ಭ್ರೂಣ ಪತ್ತೆ ಮಾಡುವಂತಹ ಕೃತ್ಯಗಳು ಕಂಡುಬಂದರೆ ಸಾರ್ವಜನಿಕರು ನೇರವಾಗಿ ನನಗೆ ಮಾಹಿತಿ ಕೊಡಿ. ಡಾ.ಕೆ.ಮೋಹನ್ ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net