

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ತಾಲೂಕಿನ ತಿರುಮಲಶಟ್ಟಿಹಳ್ಳಿ ಎಸ್‌ಪಿಜಿ ಆಸ್ಪತ್ರೆಯಲ್ಲಿ ಮಂಗಳವಾರ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿರುವ ಹೆಣ್ಣು ಭ್ರೂಣ ಪತ್ತೆಯಾಗಿದ್ದು. ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆ ಮೇಲೆ ದಾಳಿ ನಡೆಸಿ ಭ್ರೂಣವನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ.
ಪ್ರಕರಣ ಸಂಬಂಧ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಏತನ್ಮಧ್ಯೆ ಆಸ್ಪತ್ರೆ ಮುಖ್ಯ ವೈದ್ಯ ಡಾ.ಶ್ರೀನಿವಾಸ್ ನಾಪತ್ತೆಯಾಗಿದ್ದು ಮತ್ತಷ್ಟು ಅನುಮಾನ ಹುಟ್ಟುಹಾಕಿದೆ. ಈ ಸಂಬಂಧ ತಿರುಮಲಶೆಟ್ಟಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ವೈದ್ಯನ ಹುಡುಕಾಟ ನಡೆದಿದೆ.
ಪಾಲಕರು ಯಾರು? ಹೆಣ್ಣು ಭ್ರೂಣದ ಪಾಲಕರು ಯಾರು ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ತೀವ್ರ ಶೋಧ ಮುಂದುವರೆಸಿದ್ದಾರೆ. ಆಸ್ಪತ್ರೆ ದಾಖಲೆಗಳ ಪರಿಶೀಲನೆ ಹಾಗೂ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು ಪಾಲಕರನ್ನು ಶೀಘ್ರ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್‌ಪಿಜಿ ಆಸ್ಪತ್ರೆಯಲ್ಲಿ ಪತ್ತೆಯಾದ ಹೆಣ್ಣು ಭ್ರೂಣವನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿದೆ, ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ವಿಚಾರಣೆಗೆ ನಡೆಸುತ್ತಿದ್ದು, ಪ್ರಕರಣ ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಸುನೀಲ್ ಕುಮಾರ್ ತಿಳಿಸಿದ್ದಾರೆ.