

ಮಂಡ್ಯ: ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಾರಾಟವಾಗುವ ಔಷಧವನ್ನು ವೈದ್ಯರ ಸಲಹಾ ಚೀಟಿ ಇಲ್ಲದೇ ನೀಡಲು ಅವಕಾಶವಿಲ್ಲ. ಆದ್ದರಿಂದ ಇಂತಹ ಔಷಧ ಖರೀದಿ ಬಗ್ಗೆ ವರದಿ ಪಡೆದುಕೊಳ್ಳಬೇಕು. ಜತೆಗೆ ಸ್ಕಾೃನಿಂಗ್ ಸೆಂಟರ್, ಲ್ಯಾಬ್, ಕ್ಲಿನಿಕ್ ಹಾಗೂ ಆಸ್ಪತ್ರೆಯನ್ನು ಪರಿಶೀಲಿಸಿ ಕಾನೂನು ನಿಯಮ ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ 10 ದಿನದೊಳಗೆ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ಹೆಣ್ಣು ಭ್ರೂಣ ಹತ್ಯೆ ಹಾಗೂ ಲಿಂಗ ಪತ್ತೆ ತಡೆಗಟ್ಟಲು ರಚಿಸಲಾಗಿರುವ ಜಾಗೃತ ದಳದೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಮಂಡ್ಯ ತಾಲೂಕು ದುದ್ದ ಹೋಬಳಿಯ ಹಾಡ್ಯ ಗ್ರಾಮದಲ್ಲಿ ನಡೆದ ಹೆಣ್ಣು ಭ್ರೂಣ ಪತ್ತೆ ಪ್ರಕರಣ ಕುರಿತಂತೆ ಸಂಬಂಧಿಸಿದ ವ್ಯಾಪ್ತಿಯ ತಾಲೂಕು ಆರೋಗ್ಯಾಧಿಕಾರಿ, ಮೆಡಿಕಲ್ ಅಧಿಕಾರಿ, ಆಶಾ ಕಾರ್ಯಕರ್ತೆಯರಿಂದ ವರದಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಧಿಕೃತ ರೆಡಿಯೋಲಾಜಿಸ್ಟ್ ಮಾತ್ರ ಕಾರ್ಯನಿರ್ವಹಿಸಬೇಕು. ಸ್ಕಾೃನಿಂಗ್ ಸೆಂಟರ್‌ಗಳಿಗೆ ನಿಗದಿಪಡಿಸಿರುವ ರೆಡಿಯೋಲಾಜಿಸ್ಟ್ ಮಾತ್ರ ಸ್ಕಾೃನಿಂಗ್ ಕೆಲಸ ನಿರ್ವಹಿಸಬೇಕು. ಅವರನ್ನು ಹೊರತುಪಡಿಸಿ ಅವರ ಬದಲಿಗೆ ಬೇರೆಯವರು ಕಾರ್ಯನಿರ್ವಹಿಸುತ್ತಿದ್ದಲ್ಲಿ ಪರವಾನಗಿ ರದ್ದುಪಡಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಿ. ಇನ್ನು ಕೆಪಿಎಂಇ ಯಲ್ಲಿ ಪರವಾನಗಿ ಪಡೆದ ಪದ್ಧತಿಯಲ್ಲೇ ಕ್ಲಿನಿಕ್‌ಗಳು ಸೇವೆ ನೀಡಬೇಕು. ನಕಲಿ ಕ್ಲಿನಿಕ್ ಮತ್ತು ನಕಲಿ ವೈದ್ಯರು ಹೆಣ್ಣು ಭ್ರೂಣ ಹತ್ಯೆ ಹಾಗೂ ಮುಂತಾದ ಅಕ್ರಮಗಳಿಗೆ ದಾರಿ ಮಾಡಿಕೊಡುತ್ತಾರ. ಆದ್ದರಿಂದ ಜಾಗೃತ ದಳ ತಮ್ಮ ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಿ ತಮ್ಮ ವ್ಯಾಪ್ತಿಯಲ್ಲಿ ಪರಿಶೀಲಿಸಿ ವರದಿ ನೀಡಿ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ವಿವಾಹವಾಗಿ ಗಭಿರ್ಣಿಯಾಗಿರುವ ಪ್ರಕರಣಗಳು ಬಾಲ್ಯವಿವಾಹವಾಗುತ್ತದೆ. ಅವುಗಳನ್ನು ಪತ್ತೆ ಹಚ್ಚಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ 15 ದಿನದೊಳಗಾಗಿ ವರದಿ ನೀಡಬೇಕು. ಹೆಣ್ಣು ಮಗು ಇರುವ ತಾಯಿಯ ಬಗ್ಗೆ ನಿಗಾವಹಿಸಿ ಮೊದಲನೇಯ ಮಗು ಹೆಣ್ಣು ಇರುವ ತಾಯಿ ಎರಡನೇ ಮಗುವಿಗೇ ಗರ್ಭಿರ್ಣಿಯಾದಾಗ ಅವರ ಬಗ್ಗೆ ಹೆಚ್ಚಿನ ಗಮನಹರಿಸಿ. ಈ ಕೆಲಸಗಳು ನಿರಂತರವಾಗಿ ತಳಮಟ್ಟದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನಡೆಯಬೇಕು. ಅನುಮಾನಾಸ್ಪದವಾಗಿ ಗರ್ಭಪಾತವಾದಲ್ಲಿ ವೈದ್ಯಕೀಯ ಕಾರಣದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಹೆಣ್ಣು ಭ್ರೂಣ ಹತ್ಯೆ ಅಮಾನವೀಯ ಕೃತ್ಯವಾಗಿದ್ದು, ಜಿಲ್ಲೆ ತಲೆ ತಗ್ಗಿಸುವಂತಾಗಿದೆ. ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಶಿಕ್ಷಾರ್ಹ ಅಪರಾಧ. ಇದಕ್ಕೆ ಸಹಕರಿಸುವವರ ವಿರುದ್ಧ ಸಹ ಕಾನೂನು ಕ್ರಮಕ್ಕೆ ಅವಕಾಶವಿದೆ. ಈ ಬಗ್ಗೆ ಜಾಗೃತ ದಳಗಳು ಗ್ರಾಮ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಮಹಿಳಾ ಸಂಘಗಳ ಸಹಯೋಗದೊಂದಿಗೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ. ಮೂರು ತಿಂಗಳಿಗೊಮ್ಮೆ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಪಿ.ಸಿ ಆ್ಯಂಡ್ ಪಿ.ಎನ್.ಡಿ.ಟಿ ಸಭೆ ನಡೆಯಬೇಕು. ಬಳಿಕ ಎಸಿ ಸಭೆ ನಡೆಸಿ ವರದಿ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಪಿ.ಸಿ ಆ್ಯಂಡ್ ಪಿ.ಎನ್.ಡಿ.ಟಿ ಕಾಯ್ದೆಯಲ್ಲಿ ಸ್ಕಾೃನಿಂಗ್ ಸೆಂಟರ್ ಯಾವ ರೀತಿ ಇರಬೇಕು. ಯಾವ ದಾಖಲೆಗಳು ಇರಬೇಕು. ಕಾಯ್ದೆ ಉಲ್ಲಂಘಿಸಿದ್ದಲ್ಲಿ 3 ವರ್ಷ ಶಿಕ್ಷೆ ಹಾಗೂ ದಂಡ ಇರುವ ಬಗ್ಗೆ ಜಾಗೃತ ದಳದ ಸದಸ್ಯರಿಗೆ ವಿವರಿಸಿದರು.
ಇನ್ನು ಕಳೆದ ಮೂರು ವರ್ಷದಲ್ಲಿ ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳ ವಿವರ, 10ನೇ ತರಗತಿಯ ನಂತರ ಅವರ ಮುಂದಿನ ಶಿಕ್ಷಣದ ದಾಖಲಾತಿ ಅಥವಾ ಶಾಲೆಯಿಂದ ಹೊರಗೆ ಉಳಿದಿದ್ದರೆ ಏನು ಮಾಡುತ್ತಿದ್ದಾರೆ ಎಂದು ವರದಿ ನೀಡುವಂತೆ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ನಂದೀಶ್, ಶಿವಮೂರ್ತಿ, ಎಎಸ್‌ಪಿ ತಿಮ್ಮಯ್ಯ, ತಹಸೀಲ್ದಾರ್ ಡಾ.ಶಿವಕುಮಾರ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.