ಭ್ರೂಣಲಿಂಗ ಹತ್ಯೆ ತಡೆಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಯಶಸ್ವಿ ಕಾರ್ಯಾಚರಣೆ

Arogya soudha
Published on

ಬೆಂಗಳೂರು: ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವು ಆಂಧ್ರ ಪ್ರದೇಶದಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಇದರಿಂದ ಕರ್ನಾಟಕದ ತಾಯಂದಿರು ನೆರೆಯ ರಾಜ್ಯದಲ್ಲಿ ಭ್ರೂಣ ಹತ್ಯೆ ಮಾಡಿಸಿಕೊಳ್ಳುತ್ತಿರುವುದು ಪತ್ತೆಯಾಗಿದೆ.

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಡಮುರು ತಾಲ್ಲೂಕಿನ ಬಾಷಾ ನರ್ಸಿಂಗ್ ಹೋಂನಲ್ಲಿ ಕಾರ್ಯಚಾರಣೆ ಕೈಗೊಂಡಾಗ, ಭ್ರೂಣ ಹತ್ಯೆ ನಡೆಸುತ್ತಿರುವುದು ಖಚಿತಪಟ್ಟಿದೆ. ಮೂರು ಹೆಣ್ಣು ಮಕ್ಕಳನ್ನು ಹೊಂದಿದ್ದ ಮಳವಳ್ಳಿಯ 30 ವರ್ಷದ ಮಹಿಳೆ ಇಲ್ಲಿ ಭ್ರೂಣ ಹತ್ಯೆ ಮಾಡಿಸಿಕೊಳ್ಳಲು ಮುಂದಾಗಿದ್ದರು. ರಾಜ್ಯದ ಪಿಸಿ ಆ್ಯಂಡ್ ಪಿಎನ್‌ಡಿಟಿಯ ನೋಡಲ್ ಅಧಿಕಾರಿ ಡಾ. ವಿವೇಕ್ ದೊರೈ ಹಾಗೂ ಆಂಧ್ರಪ್ರದೇಶ ಡಾ.ಕೆ.ವಿ.ಎನ್.ಎಸ್. ಅನಿಲ್ ಕುಮಾರ್ ನೇತೃತ್ವದ ತಂಡ ಸೆ. 21ರಂದು ಈ ಕಾರ್ಯಾಚರಣೆ ನಡೆಸಿದೆ.

ಈ ಕಾರ್ಯಾಚರಣೆ ಕುರಿತು ಬುಧವಾರ ಆರೋಗ್ಯ ಸೌಧದಲ್ಲಿ ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಳವಳ್ಳಿಯ 30 ವರ್ಷದ ಮಹಿಳೆ ಮೂರು ಹೆಣ್ಣು ಮಕ್ಕಳನ್ನು ಹೊಂದಿದ್ದ ಕಾರಣ, ಏಜೆಂಟ್ ಮೂಲಕ ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡಿಸಿಕೊಂಡಿದ್ದರು. ಆ ವೇಳೆ ಐದು ತಿಂಗಳ ಗರ್ಭಿಣಿಯಾಗಿದ್ದರು. ಇನ್ನೊಂದು ಮಗುವು ಹೆಣ್ಣು ಎನ್ನುವುದು ತಿಳಿದ ಕಾರಣ, ಆಂಧ್ರ ಪ್ರದೇಶದ ಏಜೆಂಟ್ ಮೂಲಕ ಭ್ರೂಣ ಹತ್ಯೆಗೆ ಮುಂದಾಗಿದ್ದರು. ಈ ವೇಳೆ ರಹಸ್ಯ ಕಾರ್ಯಾರಣೆ ನಡೆಸಿದ ಇಲಾಖೆ ಅಧಿಕಾರಿಗಳು ಏಜೆಂಟ್‌ನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಪ್ಪಿತಸ್ತರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಹೆಣ್ಣು ಭ್ರೂಣ ಹತ್ಯೆ ತಡೆಯಲು ಸರ್ಕಾರ, ಇಲಾಖೆಯಿಂದ ಎಲ್ಲ ರೀತಿಯ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು. ನಮ್ಮ ಸಮಾಜ ಈ ಬಗ್ಗೆ ಜಾಗ್ರತವಾಗುವುದು ಮುಖ್ಯ. ಸಂಪೂರ್ಣವಾಗಿ ಹೆಣ್ಣು ಭ್ರೂಣ ಹತ್ಯೆ ತೊಡೆದು ಹಾಕಲು ಸಾಮಾಜಿಕ ಬದಲಾವಣೆ ಮುಖ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net