ಜಿಲ್ಲೆಯಲ್ಲಿ ಬಹಿರಂಗಗೊಂಡ ಭ್ರೂಣ ಪತ್ತೆ ದಂಧೆ: ಸಚಿವ ಚಲುವರಾಯಸ್ವಾಮಿ ಮಹತ್ವದ ಸಭೆ

Minister Cheluvarayaswami
Published on

ಮಂಡ್ಯ: ಜಿಲ್ಲೆಯಲ್ಲಿ ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನ.30ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಹತ್ವದ ಸಭೆ ನಡೆಸಲಿದ್ದಾರೆ.

ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಲಿಂಗಾನುಪಾತ ಕುಸಿತದ ಬಗ್ಗೆಯೂ ಚರ್ಚೆ ನಡೆಸಬೇಕಿದೆ. ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಜಿಲ್ಲೆಯಲ್ಲಿ ಗಂಡು ಹೆಣ್ಣಿನ ನಡುವಿನ ಲಿಂಗಾನುಪಾತ ಗಣನೀಯವಾಗಿ ಕುಸಿತ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನು ಆರೋಗ್ಯ ಇಲಾಖೆಯ ಅಂಕಿ ಅಂಶ ಸಾಬೀತುಪಡಿಸಿದೆ. ಪ್ರತಿ ಸಾವಿರ ಪುರುಷರಿಗೆ ಹೆಣ್ಣಿನ ಸಂಖ್ಯೆ 2014-15ರಲ್ಲಿ 919, 2015-16ರಲ್ಲಿ 922, 2016-17ರಲ್ಲಿ 914, 2017-18ರಲ್ಲಿ 912, 2018-19ರಲ್ಲಿ 917, 2019-20ರಲ್ಲಿ 898, 2020-21ರಲ್ಲಿ 884, 2021-22ರಲ್ಲಿ 890 ಮತ್ತು 2022-23ರಲ್ಲಿ 875 ಇದೆ. ಇನ್ನು 2001 ಜನಗಣತಿ ಪ್ರಕಾರ 934 ಹಾಗೂ 2011ರ ಪ್ರಕಾರ 939 ಇರುವುದು ಹೆಣ್ಣು ಭ್ರೂಣ ಹತ್ಯೆಯನ್ನು ಸಾಕ್ಷಿಕರಿಸುತ್ತಿವೆ. ಇದರ ವಿರುದ್ಧ ಆಗಿರುವ ಕ್ರಮದ ಬಗ್ಗೆಯೂ ಅಧಿಕಾರಿಗಳಿಂದ ವಿವರಣೆ ಪಡೆಯಬೇಕಿದೆ.

ಇದಲ್ಲದೆ ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಯಿಂದಾಗಿ ಜಿಲ್ಲೆಯಲ್ಲಿ ಅಪ್ರಾಪ್ತೆಯರು ಗರ್ಭಿಣಿಯಾಗುತ್ತಿರುವ ಆತಂಕದ ವಿಷಯದ ಬಗ್ಗೆಯೂ ಚರ್ಚೆ ನಡೆಯಬೇಕಿದೆ. ಕಾರಣ ಕಳೆದ ಏಳು ತಿಂಗಳಲ್ಲಿ 18 ವರ್ಷದೊಳಗಿನ 339 ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಇಷ್ಟಾದರೂ ಸಂಬಂಧಪಟ್ಟ ಇಲಾಖೆಗಳು ಜಾಗೃತಿ ಜಾಥಾ, ಕಾರ್ಯಕ್ರಮ ಮಾಡಿಕೊಂಡು ಕಾಲಕಳೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net