

ಸಾಲಿಗ್ರಾಮ: ಜ.26 ರಿಂದ 31ರವರೆಗೆ ನಡೆಯಲಿರುವ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಭೇರ್ಯ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜಪ್ಪ ಸೋಮವಾರ ಚಾಲನೆ ನೀಡಿದರು.
ವೀರಶೈವ ಸಮಾಜದ ಹಿರಿಯ ಮುಖಂಡ ಬಿ.ಎಂ.ಪ್ರಕಾಶ್ ಮಾತನಾಡಿ, ಸಹಸ್ರ ಸಂವತ್ಸರಗಳ ಹಿಂದೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು ಸುತ್ತೂರಿನಲ್ಲಿ ವೀರ ಸಿಂಹಾಸನ ಮಹಾಸಂಸ್ಥಾನ ಮಠ ಸ್ಥಾಪಿಸಿದರು. ಆದರೆ ಅದು ಈಗ ಕೋಟ್ಯಂತರ ಭಕ್ತರ ಮೆಚ್ಚುಗೆ ಪಡೆದಿದೆ. ಸುತ್ತೂರು ಜಾತ್ರಾ ಮಹೋತ್ಸವಕ್ಕೆ ನಾವೆಲ್ಲರೂ ಹೋಗಿ ದೇವರ ಕೃಪೆಗೆ ಪಾತ್ರರಾಗಬೇಕಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್ ಮಾತನಾಡಿ, ಜ.26ರಂದು ಉತ್ಸವ ಮೂರ್ತಿಯ ಗದ್ದುಗೆಗೆ ಬಿಜಂಗೈಸುವುದು, 27 ರಂದು ಕುಂಬಾಭಿಷೇಕ ಮತ್ತು ಸಾಮೂಹಿಕ ವಿವಾಹ, 28ರಂದು ರಥೋತ್ಸವ ಮತ್ತು ವೀರಭದ್ರೇಶ್ವರ ಕೊಂಡೋತ್ಸವ, 29ರಂದು ಮಹದೇಶ್ವರ ಕೊಂಡೋತ್ಸವ, ಲಕ್ಷ ದೀಪೋತ್ಸವ ಮತ್ತು ಮಹದೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ, ಅನ್ನ ಬ್ರಹ್ಮೋತ್ಸವ ನಡೆಯಲಿದೆ. ಇದರೊಂದಿಗೆ ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ-ದೇಸಿ ಆಟಗಳು, ದೋಣಿ ವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ಛಾಯಾಚಿತ್ರ ಸ್ಪರ್ಧೆ ನಡೆಯಲಿದ್ದು, ಎಲ್ಲರೂ ಭಾಗವಹಿಸಬಹುದು ಎಂದರು.
ವೀರಶೈವ ಸಮಾಜದ ಯೂತ್ ಅಧ್ಯಕ್ಷ ಅನಿಲ್, ಗ್ರಾಮ ಪಂಚಾಯಿತಿ ಲೆಕ್ಕ ಸಹಾಯಕಿ ಅಶ್ವಿನಿ, ಸದಸ್ಯರಾದ ಪ್ರಕಾಶ್, ಬಿ.ಕೆ. ಕುಮಾರ್, ಜಯಕೀರ್ತಿ, ರಕ್ಷಿತ್, ನಿವೃತ್ತ ಶಿಕ್ಷಕ ನಿಂಗಪ್ಪ, ವಿಜಯ್, ಟೈಲರ್ ನಿಂಗನಾಯಕ, ಜಯಂತ್ ಇತರರಿದ್ದರು.